

ಕಾರ್ಕಳ: ವಿದ್ಯಾರ್ಥಿ ಎಂಬ ನಾಣ್ಯಕ್ಕೆ ಮೌಲ್ಯ ಬರಲು ಶಿಕ್ಷಕರು ಮತ್ತು ಪಾಲಕರೆಂಬ ಎರಡು ಮುಖಗಳ ಪಾತ್ರ ಬಹುಮುಖ್ಯ. ಕನಸು ಹೊತ್ತ ವಿದ್ಯಾರ್ಥಿಗಳನ್ನು ಪೋಷಿಸುವ ಪಾಲಕರು, ವಿದ್ಯಾಭ್ಯಾಸ ನೀಡುವ ಶಿಕ್ಷಕರನ್ನು ನಾವು ಗೌರವಿಸಬೇಕು. ಈ ನಿಟ್ಟಿನಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕಾರ್ಯ ಮೆಚ್ಚುವಂತಹದ್ದು. ಶಿಕ್ಷಣದೊಂದಿಗೆ ಸಂಸ್ಕಾರ, ದೇಶಭಕ್ತಿ, ಮೌಲ್ಯಯುತ ಶಿಕ್ಷಣಕ್ಕೂ ಪ್ರಾಶಸ್ತ್ಯಕೊಡುತ್ತಿರುವುದು ಆದರ್ಶಪ್ರಾಯ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ಹೇಳಿದರು.
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಸಂಜೀವ ಶೆಟ್ಟಿ ಕೊರ್ಗಿ, ಬಿಎಂಎಂ ಪ್ರೌಢಶಾಲೆ ಕೂರಾಡಿಯ ನಿವೃತ್ತ ಮುಖ್ಯಶಿಕ್ಷಕ ಎಸ್.ಮೂರ್ತಿರಾವ್, ವಿಷ್ಣುಮೂರ್ತಿ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಅನಂತ ಪದ್ಮನಾಭ ಭಟ್, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ರಮೇಶ್ ಶೇರ್ವೆಗಾರ್ ಅವರನ್ನು ಸನ್ಮಾನಿಸಲಾಯಿತು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ ಇದ್ದರು. ಮಣಿಪಾಲ ಜ್ಞಾನಸುಧಾ ಉಪಪ್ರಾಂಶುಪಾಲ ರವಿ ಜಿ., ಹೇಮಂತ, ಉಪನ್ಯಾಸಕರು ಉಪಸ್ಥಿತರಿದ್ದರು. ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ನಕ್ಷಾ ಕಲ್ಕೂರ್ ನಿರೂಪಿಸಿ, ವಂದಿಸಿದರು.