ಬಿಡದೆ ಸಾಧನೆಗೈಯ್ಯುವ ಛಲ ಅಧ್ಯಾಪಕರದ್ದಾಗಲಿ

gan (2)
Published on

ಕುಂದಾಪುರ: ಅಧ್ಯಾಪಕರು ಪೂರ್ಣತೆಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರಬೇಕು. ಬಿಡದೆ ಸಾಧನೆಗೈಯ್ಯುವ ಛಲ ಅಧ್ಯಾಪಕರದ್ದಾಗಿರಬೇಕು. ಮಕ್ಕಳೊಂದಿಗೆ ಪ್ರೀತಿಯಿಂದಿದ್ದು, ಅವರಲ್ಲಿರುವ ದುರ್ಗುಣಗಳನ್ನು ಶಿಕ್ಷಕರು ದೂರಮಾಡಬೇಕು ಎಂದು ಸುಬ್ರಹ್ಮಣ್ಯದ ರಾಘವೇಂದ್ರ ಭಾರತೀ ಸಂಸ್ಕೃತ ಮಹಾವಿದ್ಯಾಲಯ ನಿವೃತ್ತ ಪ್ರಾಂಶುಪಾಲ ವಿಶ್ವೇಶ್ವರ ಗೋಪಾಲ ಹೆಗಡೆ ಹೇಳಿದರು.

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷ ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಮತ್ತು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿ ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿದರು. ಶಾಲೆಯ ಎಲ್ಲ ಶಿಕ್ಷಕರರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಶಾಲೆಯ 21 ವರ್ಷಗಳ ಐತಿಹಾಸಿಕ ಸಾಧನೆಗೆ ಸಾಕ್ಷಿಗಳಾದ ಶಿಕ್ಷಕರಿಗೆ ಮತ್ತು ಕ್ರೀಡಾ ಸಾಧನೆಗಳನ್ನು ತರುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಶಿಕ್ಷಕರನ್ನು ವಿಶೇಷವಾಗಿ ಗೌರವಿಸಲಾಯಿತು.

ಶಾಲಾ ಸಂಸ್ಥಾಪಕ ಎಚ್.ರಾಮಚಂದ್ರ ಭಟ್ಟರ ಪತ್ನಿ ರಮಾದೇವಿ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪ ಪ್ರಾಂಶುಪಾಲ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸುಜಾತಾ ಸದಾರಾಮ್, ಸಂಯೋಜಕಿ ಸವಿತಾ ಭಟ್, ಮಧು ಕೆ.ಎಲ್., ಲತಾ ದೇವಾಡಿಗ, ದೀಪಿಕಾ, ಶ್ರುತಿ, ಫರ್ನಾಜ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಅಕ್ಷತಾ ಸ್ವಾಗತಿಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ, ಶಾಲಾ ಪ್ರಾಂಶುಪಾಲ ಶರಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರಜ್ವಲ್ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿನಿ ಪ್ರಾಂಜಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net