ಬೆಂಗಳೂರು ಕೇಂದ್ರದಲ್ಲಿರುವ ವಿಧಾನಸಭಾ ಕ್ಷೇತ್ರಗಳು ಕಾಸ್ಮಾಪಾಲಿಟಿನ್ ಕಲ್ಚರ್ ಜತೆಗೆ ವಿವಿಧ ಭಾಷೆ, ಧರ್ಮದ ಜನರು ವಾಸವಿರುವ ತಾಣಗಳು. ಯಾವುದೇ ಒಂದು ನಿರ್ದಿಷ್ಟ ಜಾತಿ, ಧರ್ಮಗಳ ಮತದಾರರು ಇಲ್ಲಿಲ್ಲ. ಅಷ್ಟೇ ಅಲ್ಲ, ಪ್ರಪಂಚದ ಬಹುತೇಕ ಎಲ್ಲ ರಾಷ್ಟ್ರ, ಭಾರತದ ಎಲ್ಲ ರಾಜ್ಯಗಳ ಜನರೂ ಇಲ್ಲಿ ನೆಲೆಸಿದ್ದಾರೆ ಎಂದರೆ ಅತಿಶಯೋಕ್ತಿ ಏನಲ್ಲ. ಹಾಗಾಗಿ ಬೇರೆಲ್ಲೆಡೆಗಿಂತ ಈ ಕ್ಷೇತ್ರಗಳು ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ. ಹಿಂದುಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಕನ್ನಡ, ತೆಲುಗು, ತಮಿಳು ಭಾಷಿಕರು... ಹೀಗೆ ನಾನಾ ಧರ್ಮ, ಭಾಷೆಗಳ ಜನರು ಜತೆಗೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು ಭಾಗ ಹೀಗೆ ಎಲ್ಲೆಲ್ಲಿಂದಲೋ ವಲಸೆ ಬಂದವರೂ ಇಲ್ಲಿ ಬದುಕು ಕಂಡುಕೊಂಡಿದ್ದಾರೆ. ಹಾಗಾಗಿ ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ಈ ಕ್ಷೇತ್ರಗಳಲ್ಲಿ ಚುನಾವಣೆ ಗೆಲುವು ಸಾಧ್ಯವಿಲ್ಲ. ಆದಾಗ್ಯೂ ಕೆಲವು ಪ್ರಬಲ ಸಮುದಾಯಗಳನ್ನೇ ರಾಜಕೀಯ ಪಕ್ಷಗಳು ಬಂಡವಾಳ ಮಾಡಿಕೊಂಡಿವೆ. ಬೆಂಗಳೂರು ಸೇರಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಹೋದರೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಈ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿಗೆ ಇಳಿಯಲಿವೆ. ಜೆಡಿಎಸ್ ಕೂಡ ಬೆಂಗಳೂರನ್ನು ಕೇಂದ್ರೀಕರಿಸಿದೆ. ಜನತಾ ಜಲಧಾರೆ, ಜನತಾಮಿತ್ರ ಯಾತ್ರೆ ಮೂಲಕ ಸಣ್ಣ ಸಂಚಲನ ಮೂಡಿಸಿದೆ. ಆದರೆ, ಈ ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಗೆಲ್ಲುವ ಕುದುರೆಗಳೇ ಸಿಗುತ್ತಿಲ್ಲ. ಆಮ್ ಆದ್ಮಿ ಪಾರ್ಟಿ ಕೂಡ ತನ್ನ ನೆಲೆ ಸ್ಥಾಪಿಸಲು ಸಜ್ಜಾಗುತ್ತಿದೆ.