

ಹುಬ್ಬಳ್ಳಿ: ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ನಿರ್ಮಾಣ ಮಾಡಿದರೆ ಅದನ್ನು ಒಡೆದು ಹಾಕುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಭಕ್ತ ಕನಕದಾಸ ಜಯಂತಿ ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಅವರು ಟಿಪ್ಪು ಪುತ್ಥಳಿ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಮೈಸೂರು ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದ ದೇಶಗಳು. ಮುಸ್ಲಿಮರು ಹೇಗೆ ಪಾಕಿಸ್ತಾನಕ್ಕೆ ಹೋಗಿ ಮುಸ್ಲಿಂ ರಾಷ್ಟ್ರವಾಯಿತೋ ಅದೇ ರೀತಿ ಭಾರತವೂ ಹಿಂದೂ ರಾಷ್ಟ್ರವಾಗಿದೆ. ಒಂದೇ ದೇಶದಲ್ಲಿ ಎರಡು ಧರ್ಮೀಯರು ಇರಬಾರದು ಎಂಬ ಉದ್ದೇಶದಿಂದಲೇ ಗಾಂಧೀಜಿ ಹಾಗೂ ಜಿನ್ನಾ ದೇಶವನ್ನು ಇಬ್ಭಾಗ ಮಾಡಿದರು ಎಂದರು.
ಚುನಾವಣೆಯಲ್ಲಿ ಸ್ಪರ್ಧೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಯ. ನನ್ನಂಥವರು ಬಿಜೆಪಿಗೆ ಬೇಡವಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸುವ ಇಚ್ಛೆಯೂ ನನಗಿಲ್ಲ. ಬೆಂಬಲದ ಅವಶ್ಯಕತೆಯೂ ಇಲ್ಲ. ಕ್ಷೇತ್ರ ಯಾವುದು ಎಂದು ನಿರ್ಧಾರ ಮಾಡಿಲ್ಲ. ಕಾರ್ಕಳ, ಪುತ್ತೂರು, ಉಡುಪಿ, ಜಮಖಂಡಿ, ತೇರದಾಳ, ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.