

ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾಲಿಕೆಯ 63 ಉಪ ವಿಭಾಗ ಕಚೇರಿಗಳಲ್ಲಿ ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಏಕಗವಾಕ್ಷಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಪಾಲಿಕೆಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಜತೆ ನಡೆದ ಜಂಟಿ ಸಭೆಯಲ್ಲಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ವಿಸರ್ಜನೆಗೆ ಸ್ಯಾಂಕಿ, ಹಲಸೂರು, ಯಡಿಯೂರು, ಹೆಬ್ಬಾಳ ಕೆರೆ ಸೇರಿ ಇತರೆ ಕಲ್ಯಾಣಿಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವೆಡೆ ವಸತಿ ಪ್ರದೇಶದಿಂದ ಕೆರೆಗಳು ದೂರ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಚಿಕ್ಕ ಮೂರ್ತಿಗಳ ವಿಸರ್ಜನೆಗೆ ವಾರ್ಡ್‌ಗಳಲ್ಲಿ ತಾತ್ಕಾಲಿಕವಾಗಿ ಸಂಚಾರಿ ಘಟಕಗಳ (ಮೊಬೈಲ್ ಟ್ಯಾಂಕ್) ವ್ಯವಸ್ಥೆ ಮಾಡಬೇಕು ಎಂದರು.
ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಸುತ್ತಮುತ್ತ ಹಾಗೂ ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡ್ ಅಳವಡಿಸಬೇಕು. ವಿಸರ್ಜನಾ ಕೇಂದ್ರಗಳಲ್ಲೂ ಪಾಳಿ ಅನುಸಾರ ನುರಿತ ಈಜುಗಾರರು ಸೇರಿ ಅಗತ್ಯ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳಬೇಕು. ಸಿಸಿ ಟಿ.ವಿ., ವಿದ್ಯುತ್ ದೀಪ ಅಳವಡಿಸಬೇಕು. ಅಲ್ಲಿ ಸಂಗ್ರಹವಾಗುವ ಹೂವು, ಬಾಳೆಯ ಕಂದು, ತಳಿರು ತೋರಣ ಸೇರಿ ಇತರ ವಸ್ತುಗಳ ಸಂಗ್ರಹಣೆಗೆ ಸಾಗಣೆ ವಾಹನ ಸಜ್ಜುಗೊಳಿಸಬೇಕು. ದೋಣಿ, ಕ್ರೇನ್, ನೀರೆತ್ತುವ ಪಂಪ್‌ಗಳ ವ್ಯವಸ್ಥೆ ಮಾಡಬೇಕು. ಪೊಲೀಸ್ ಬಂದೋಬಸ್ತ್ ಇರಬೇಕು. ವಿಸರ್ಜನಾ ಮೆರವಣಿಗೆ ವೇಳೆ ಪಟಾಕಿ, ಸಿಡಿಮದ್ದು ಸಿಡಿಸುವುದು ಹಾಗೂ ನಾಗರಿಕರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು. ಬಿಬಿಎಂಪಿಯ ಎಲ್ಲ ವಿಶೇಷ, ವಲಯ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಉಪ ಆಯುಕ್ತರು (ಆಡಳಿತ), ಅಗ್ನಿಶಾಮಕ, ಬೆಸ್ಕಾಂ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತಿತರರಿದ್ದರು.
ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಸಿದರೆ ದಂಡ
ಪಿಒಪಿ ಗಣೇಶ ಬಳಸಬೇಡಿ:
ಕೆರೆಗಳು ಕಲುಷಿತವಾಗದಂತೆ ತಡೆಯಲು ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಯಾವುದೇ ಕಾರಣಕ್ಕೂ ಪಿಒಪಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು. ನಿಗದಿಪಡಿಸಿದ ಸ್ಥಳಗಳಲ್ಲೇ ವಿಸರ್ಜಿಸಬೇಕು. ರಾಸಾಯನಿಕ ಬಣ್ಣಗಳು, ಥರ್ಮಕೋಲ್ ಹಾಗೂ ಪ್ಲಾಸ್ಟರ್ ಆ್ ಪ್ಯಾರೀಸ್ ಗಣೇಶ ಮೂರ್ತಿ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಸಿದರೆ ದಂಡ ವಿಧಿಸಲಾಗುವುದು ಎಂದು ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದರು. ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಸ್ವಚ್ಛತೆ ಕಾಪಾಡುವ ಸೇರಿ ಇತರೆ ಸೂಚನೆಗಳನ್ನು ಕಡ್ಡಾಯವಾಗಿ ಅನುಮತಿ ಆದೇಶ ಪತ್ರದಲ್ಲಿ ವಿವರಣೆ ಸಮೇತ ಆದೇಶ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಫೆಕ್ಸ್,ಬ್ಯಾನರ್ ಅಳವಡಿಸುವುದು ಸೇರಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದರು.