ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಸಿದರೆ ದಂಡ

chamundi
Published on

ಮೈಸೂರು: ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದವರ ವಿರುದ್ಧ ‘ದಂಡಾಸ್ತ್ರ’ ಬಳಕೆ ಶುಕ್ರವಾರದಿಂದ ಜಾರಿಗೆ ಬಂದಿದೆ. ಇಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದರೆ ದಂಡ ತೆರಬೇಕಾಗುತ್ತದೆ.


ವನ್ಯಜೀವಿಗಳ ತಾಣ, ಹಸಿರೀಕರಣ ವಲಯವಾದ ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಹಾವಳಿ ಅಧಿಕವಾಗಿದೆ. ಇದರಿಂದ ಇಲ್ಲಿನ ಅರಣ್ಯ ಪ್ರದೇಶಕ್ಕೆ ಹಾನಿ ಆಗುತ್ತಿದೆ. ಬೆಟ್ಟದ ಪರಿಸರದಲ್ಲಿ ಜೀವಿಸುತ್ತಿರುವ ಪ್ರಾಣಿ-ಪಕ್ಷಿ ಸಂಕುಲಕ್ಕೂ ಕುತ್ತು ಬಂದಿದೆ. ಆದ್ದರಿಂದ ಸೆ. 1ರಿಂದ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಇದರೊಂದಿಗೆ, ಬೆಟ್ಟದ ಧಾರ್ಮಿಕ ಪಾವಿತ್ರೃಕ್ಕೆ ಧಕ್ಕೆಯಾಗುವ ಅನೈತಿಕ ಚಟುವಟಿಕೆಗಳಿಗೂ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಕೆಲವು ನಿಯಮ ಜಾರಿಗೊಳಿಸಲಾಗಿದೆ.


ದಂಡಾಸ್ತ್ರ ಪ್ರಯೋಗಕ್ಕೂ ಮುನ್ನ ಬೆಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಬೆಟ್ಟದಲ್ಲಿರುವ ಎಲ್ಲ ಮಳಿಗೆಗಳಿಗೆ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ, ಪ್ಲಾಸ್ಟಿಕ್ ಮಾರಾಟಕ್ಕೆ ನಿರ್ಬಂಧ ಕುರಿತು ಜನರು, ಪ್ರವಾಸಿಗರು, ಸ್ಥಳೀಯರಿಗೆ ತಿಳಿವಳಿಕೆ ನೀಡಲಾಗಿದೆ.


ಅದರಲ್ಲೂ ಬೆಟ್ಟದಲ್ಲಿರುವ ಪೂಜಾ ಸಾಮಗ್ರಿಗಳ ಮಾರಾಟ ಮಳಿಗೆ, ವಿವಿಧ ಅಂಗಡಿಗಳ ಮಾಲೀಕರಿಗೂ ಕಠಿಣ ಎಚ್ಚರಿಕೆಯನ್ನೂ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಮಾರಾಟ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಪ್ಲಾಸ್ಟಿಕ್ ಕವರ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಮಾರಾಟಕ್ಕೆ ತರದಂತೆ ಮನವೊಲಿಸಲಾಗಿದೆ. ಇದರಿಂದಾಗಿ ಪ್ಲಾಸ್ಟಿಕ್ ಬಳಕೆ ಗಣನೀಯವಾಗಿ ತಗ್ಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪ್ಲಾಸ್ಟಿಕ್ ಬಳಕೆ ಮೇಲೆ ಕಣ್ಗಾವಲು ಇಟ್ಟಿದ್ದಾರೆ.


ಈ ಎಲ್ಲ ಪ್ರಯೋಗದ ಬಳಿಕ ದಂಡ ವಿಧಿಸಲು ಅರಣ್ಯ ಇಲಾಖೆ ಮುಂದಾಗಿದೆ. ಬೆಟ್ಟದ ಸೂಕ್ಷ್ಮ ಪರಿಸರ ವಲಯವನ್ನು ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 76 ಹಾಗೂ 99(1)ರಂತೆ ಹಾಗೂ ಕರ್ನಾಟಕ ಅರಣ್ಯ ನಿಯಮ 1969ರ ನಿಯಮ 69ರಡಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗುವವರಿಗೆ ದಂಡ ಹಾಕಲಾಗುತ್ತಿದೆ.


ಯಾವುದಕ್ಕೆ ಎಷ್ಟು ದಂಡ?
ಬೆಟ್ಟದ ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದರೆ 500 ರೂ., ಬೆಟ್ಟದ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸಿದರೆ 1000 ರೂ., ರಸ್ತೆಯುದ್ದಕ್ಕೂ ಆಹಾರ ಪೊಟ್ಟಣ, ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ ಸೇರಿದಂತೆ ಇನ್ನಿತರ ತ್ಯಾಜ್ಯ ಎಸೆದರೆ 500 ರೂ. ದಂಡ ತೆರಬೇಕಾಗುತ್ತದೆ.

ಜತೆಗೆ, ಬೆಟ್ಟದ ಮೇಲಿನ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡಿ ಮೊದಲ ಬಾರಿಗೆ ಸಿಕ್ಕಿಬಿದ್ದರೆ 2500 ರೂ., ಎರಡನೇ ಬಾರಿ ಸಿಕ್ಕಿಬಿದ್ದರೆ 5 ಸಾವಿರ ರೂ., ಮೂರನೇ ಬಾರಿ ಸಿಕ್ಕಿಬಿದ್ದರೆ 10 ಸಾವಿರ ರೂ. ದಂಡ ವಿಧಿಸಿ, ಲೈಸೆನ್ಸ್ ರದ್ದು ಮಾಡಲು ಶಿಫಾರಸು ಮಾಡಲಾಗುತ್ತದೆ.
ವನ್ಯಪಾಣಿಗಳಿಗೆ ಆಹಾರ ನೀಡುವವರು, ಉಪಟಳ ಮಾಡುವವರಿಗೆ 1 ಸಾವಿರ ರೂ., ಅರಣ್ಯ ಸಂಪತ್ತಿಗೆ ಇನ್ನಿತರ ವಿಧದಲ್ಲಿ ಹಾನಿಯುಂಟು ಮಾಡುವವರಿಗೂ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ.


ರಾತ್ರಿ ಹೊತ್ತು ಸಂಚಾರ ನಿಷೇಧ:
ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಅನಧಿಕೃತವಾಗಿ ಪ್ರವೇಶಿಸುವ ಹೊರಗಿನ ಜನರಿಗೆ 2,500 ರೂ., ಈ ವೇಳೆ ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ಹಾನಿಕಾರಕ ವಸ್ತುಗಳನ್ನು ಹೊಂದಿದ್ದರೆ 5 ಸಾವಿರ ರೂ. ದಂಡ ಹಾಕಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net