ಚಿಂದಿ ಆಯುತ್ತಿದ್ದವರ ಮಗ ಇಂದು ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ ಆಯ್ಕೆ! ಪುತ್ರನ ಯಶಸ್ಸಿಗೆ ತಾಯಿ ಕಣ್ಣೀರು

ವಿಜಯವಾಣಿ - 2024-07-08T174512.813
Published on

ಬಾಗಲಕೋಟೆ: ಬೀದಿ ಬೀದಿಯಲ್ಲಿ ಗುಜುರಿ ವಸ್ತುಗಳನ್ನು ಆಯ್ದು ಕಷ್ಟದ ಬದುಕನ್ನು ಸಾಗಿಸುತ್ತಿದ್ದ ಮಹಿಳೆಯ ಪುತ್ರ ಇಂದು ಯುಪಿಎಸ್ಸಿ ನಡೆಸುವ ಸಿಎಪಿಎಫ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಇದೀಗ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸತತ ನಾಲ್ಕು ಬಾರಿ ಪರೀಕ್ಷೆಯಲ್ಲಿ ವಿಫಲನಾಗಿದ್ದ ಮಗ, ಈ ಬಾರಿ ಪಾಸ್ ಆಗಿದ್ದು, ತಾಯಿಗೆ ಎಲ್ಲಿಲ್ಲದ ಸಂತೋಷ ತಂದಿದೆ.

ಯುಪಿಎಸ್ಸಿ ನಡೆಸುವ ಸಿಎಪಿಎಫ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಯುವಕನನ್ನು ಮೊಹಮ್ಮದ್ ಅಜರುದ್ಧಿನ್​ ಹಾಲ್ಯಾಳ ಎಂದು ಹೇಳಲಾಗಿದ್ದು, ಬಾಗಲಕೋಟೆಯ ಇಳಕಲ್ ನಗರದದ ನಿವಾಸಿ. ನಾಲ್ಕನೇ ಬಾರಿ ಪರೀಕ್ಷೆ ಪಾಸ್​ ಆಗುವ ಮೂಲಕ ಸಾಧನೆಗೈದ ಮೊಹಮ್ಮದ್​ಗೆ ಇದೀಗ ವ್ಯಾಪಕ ಪ್ರಶಂಸೆ, ಮೆಚ್ಚುಗೆಗೆಳು ಹರಿದುಬರುತ್ತಿವೆ.

ಮನೆಯಲ್ಲಿ ಕಡು ಬಡತನವಿದ್ದರೂ ಮಗನ ಓದಿಗೆ ಯಾವುದೇ ಕೊರತೆ ಉಂಟುಮಾಡದ ತಾಯಿ ಬಿಬಿಜಾನ್, ಪತಿಯನ್ನು ಕಳೆದುಕೊಂಡಾಗಿನಿಂದಲೂ ತಾವೊಬ್ಬರೇ ಚಿಂದಿ ಆಯ್ದು, ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೊದಲು ಪ್ಲಾಸ್ಟಿಕ್ ಆಯ್ದು ಕುಟುಂಬ ನಡೆಸುತ್ತಿದ್ದ ಮೊಹಮ್ಮದ್​ ತಾಯಿ, ಈಗ ಗುಜುರಿ ತುಂಬುವ ಕಾಯಕ ಮಾಡುತ್ತಿದ್ದಾರೆ.

6ನೇ ತರಗತಿಗೆ ನವೋದಯ ಶಾಲೆ, ಧಾರವಾಡ ಕೃಷಿ ವಿವಿಯಲ್ಲಿ ಪದವಿ ಮುಗಿಸಿದ ಮೊಹಮ್ಮದ್, ಮುಂಬೈ ಹಾಗೂ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆದಿದ್ದಾರೆ. ತಮ್ಮ ಶೈಕ್ಷಣಿಕ ಜೀವನದಲ್ಲಿ ತಾಯಿ ಹಾಗೂ ಸಹೋದರರು ಮಾಡಿದ ಸಹಾಯವನ್ನು ನೆನೆದ ಅವರು, ಬಾಲ್ಯದಿಂದ ಇಲ್ಲಿಯವರೆಗೂ ನಮ್ಮ ಅಮ್ಮ ಬಡತನ ಏನು ಎಂಬುದನ್ನು ತೋರಿಸಲೇ ಇಲ್ಲ. ಆ ರೀತಿ ಸಾಕಿದ್ದಾರೆ ಎಂದರು.

ಇನ್ನು ಯುಪಿಎಸ್ಸಿ ಕನಸು ಹೊತ್ತ ಯುವಕರಿಗೆ ಮಹತ್ವದ ಸಲಹೆ ನೀಡಿದ ಮೊಹಮ್ಮದ್​, "ಪರೀಕ್ಷೆಯಲ್ಲಿ ಒಂದು ಸಲ ಫೇಲ್ ಆಗಿದ್ದೇನೆಂದು ಪ್ರಯತ್ನ ಅಲ್ಲಿಗೆ ನಿಲ್ಲಿಸಬೇಡಿ. ಆತ್ಮವಿಶ್ವಾಸ, ನಿಷ್ಠೆಯಿಂದ ಪ್ರಯತ್ನ ಮಾಡಿ, ಖಂಡಿತ ಯಶಸ್ಸು ಲಭಿಸುತ್ತದೆ" ಎಂದರು. ಮಗನ ಯಶಸ್ಸನ್ನು ನೋಡಲು ಅವರ ತಂದೆ ಇರಬೇಕಿತ್ತು ಎಂದು ಕಣ್ಣೀರಿಟ್ಟ ತಾಯಿಗೆ ಕುಟುಂಬಸ್ಥರು ಸಾಂತ್ವನ ಹೇಳಿದರು. ಅಜರುದ್ಧೀನ್ ಸಾಧನೆಗೆ ನಗರದ ಜನತೆ ಸನ್ಮಾನ ಮಾಡಿದ್ದು, ಕುಟುಂಬಸ್ಥರು ಹಬ್ಬದಂತೆ ಸಂಭ್ರಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net