

ಹೈದರಾಬಾದ್: ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಯಾದಗಿನಿಂದ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾದಲ್ಲಿ ರೆಬೆಲ್ಸ್ಟಾರ್ ಪ್ರಭಾಸ್ ಅಭಿನಯಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಪ್ರಭಾಸ್ ಅಭಿಮಾನಿಗಳಿಗೆ ಸಂತೋಷವನ್ನು ಇಮ್ಮಡಿಗೊಳಿಸಲು ಮತ್ತೊಂದು ಶುಭ ಸುದ್ದಿ ಬಹಿರಂಗವಾಗಿದೆ. ಪ್ರಭಾಸ್ ಅವರ ಮುಂಬರುವ ಸಿನಿಮಾ ಸ್ಪಿರಿಟ್ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಈಗ ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಸ್ಪಿರಿಟ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾ ಬಗ್ಗೆ ಮಾತನಾಡಿದ ನಟ ಪ್ರಭಾಸ್, ಇದು ನನ್ನ 25ನೇ ಸಿನಿಮಾ. ಸ್ಪಿರಿಟ್ ಕಥೆ ಅದ್ಭುತವಾಗಿದೆ ಮತ್ತು ಇದು ನನ್ನ ಅಭಿಮಾನಿಗಳಿಗೆ ವಿಶೇಷ ಚಿತ್ರವಾಗಲಿದೆ. ಸಂದೀಪ್ ರೆಡ್ಡಿ ವಂಗ ಪ್ರತಿಯೊಬ್ಬರ ಕನಸಿನ ನಿರ್ದೇಶಕ, ಅವರೊಂದಿಗೆ ಕೆಲಸ ಮಾಡುವುದು ನನಗೆ ಸಿಕ್ಕ ದೊಡ್ಡ ಅವಕಾಶ ಎಂದಿದ್ದರು.
ಸಂದೀಪ್ ರೆಡ್ಡಿ ವಂಗಾ ಅವರು ಸ್ಪಿರಿಟ್ ಸಿನಿಮಾದಲ್ಲಿ ಪ್ರಭಾಸ್ಗೆ ಎದುರಾಗಿ ಅಂದರೆ ವಿಲನ್ ಪಾತ್ರಕ್ಕೆ ದಕ್ಷಿಣ ಕೊರಿಯಾದ ಸೂಪರ್ಸ್ಟಾರ್ ಮಾ ಡಾಂಗ್ ಸಿಯೋಕ್ ಅವರನ್ನು ತರುತ್ತಿದ್ದಾರೆ ಎನ್ನಲಾಗಿದೆ. ಮಾ ಡಾಂಗ್-ಸಿಯೋಕ್ ಅನ್ನು ಕೊರಿಯನ್ ಚಲನಚಿತ್ರೋದ್ಯಮದಲ್ಲಿ ಡಾನ್ ಲೀ ಎಂದೂ ಕರೆಯುತ್ತಾರೆ. ಅವರನ್ನು ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್ನ 'ಟ್ರೇನ್ ಟು ಬುಸನ್', 'ಡಿರೈಲ್ಡ್', 'ದಿ ಔಟ್ಲಾಸ್', 'ದಿ ಬ್ಯಾಡ್ ಗೈಸ್: ರೀನ್ ಆಫ್ ಚೋಸ್' ಮತ್ತು 'ಎಟರ್ನಲ್ಸ್' ಸಿನಿಮಾಗಳಲ್ಲಿ ನಟಿನಂತಹ ಶಕ್ತಿಶಾಲಿ ಚಲನಚಿತ್ರಗಳಲ್ಲಿ ಕಾಣಬಹುದು.
ಮಾ ಡಾಂಗ್-ಸಿಯೋಕ್ ವಿಲನ್ ಆಗಿ ನಟಿಸುವುದರ ಬಗ್ಗೆ ತಂಡದಿಂದ ಇನ್ನೂ ಅಧಿಕೃತ ಘೋಷಣೆ ಬಂದಿಲ್ಲ. ಈ ಸುದ್ದಿ ಜತೆಗೆ ಸಿನಿಮಾದಲ್ಲಿ ಪ್ರಭಾಸ್ ಜತೆ ನಟಿ ರಶ್ಮಿಕಾ ಮಂದಣ್ಣ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪಿರಿಟ್ ಅನ್ನು ಪ್ಯಾನ್-ಏಷ್ಯನ್ ಚಿತ್ರ ಮಾಡಲು ತಯಾರಕರು ತಯಾರಿ ನಡೆಸುತ್ತಿದ್ದಾರೆ ಎಂಬ ಮಾತು ಟಾಲಿವುಡ್ನಲ್ಲಿ ಹರಿದಾಡುತ್ತಿದೆ.(ಏಜೆನ್ಸೀಸ್)