

ಮುಂಬೈ: ಕಲ್ಕಿ 2898 AD ಸಿನಿಮಾ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಹಿಟ್ನೊಂದಿಗೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಲೆಕ್ಷನ್ನೊಂದಿಗೆ ಮುನ್ನಡೆಯುತ್ತಿದೆ. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಶೋಭನಾ, ಅನ್ನಾ ಬೆನ್ ಮತ್ತು ದಿಶಾ ಪಟಾನಿ ಅವರ ನಟನೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್ ನೋಡಿದ ಬಳಿಕ ಎಲ್ಲರ ಗಮನ ಸೀಕ್ವೆಲ್ ಕಡೆ ನೆಟ್ಟಿದೆ. ಈ ನಡುವೆ ಮುಂದಿನ ಭಾಗದಲ್ಲಿ ಪ್ರಭಾಸ್ ಪಾತ್ರದ ಬಗ್ಗೆ ನಟರೊಬ್ಬರು ಭವಿಷ್ಯ ನುಡಿದಿದ್ದಾರೆ.
ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಸೂಪರ್ಹಿಟ್ ಆಗಿದ್ದ ಬಿಆರ್ ಚೋಪ್ರಾ ಅವರ ಶೋ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿದ್ದ ನಟ ನಿತೀಶ್ ಭಾರದ್ವಾಜ್ ಕಲ್ಕಿ 2898 AD ಬಗ್ಗೆ ಮಾತನಾಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿರುವ ಇತ್ತೀಚಿನ ಸಂದರ್ಶನದಲ್ಲಿ ಕಲ್ಕಿ 2898 ಎಡಿ ನಿರ್ದೇಶಕ ನಾಗ್ ಅಶ್ವಿನ್ ಅವರನ್ನು ಮೆಚ್ಚಿಕೊಂಡಿದ್ದಾರೆ. ಮಹಾಭಾರತದ ಪಾತ್ರಗಳನ್ನು ಮತ್ತು ಮಹಾವಿಷ್ಣುವಿನ ಕೊನೆಯ ಅವತಾರ ಕಲ್ಕಿಯ ಜನ್ಮವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡಿದ್ದಾರೆ ಎಂದಿದ್ದಾರೆ.
ಹಿಂದಿ ಚಿತ್ರ ನಿರ್ಮಾಪಕರು ದಕ್ಷಿಣದಿಂದ ಕಲಿಯಬೇಕು. ಏಕೆಂದರೆ ಅವರು ನಮ್ಮ ಧರ್ಮಗ್ರಂಥಗಳು ಮತ್ತು ಮಹಾಕಾವ್ಯಗಳಲ್ಲಿನ ಪಾತ್ರವನ್ನು ಆಳವಾಗಿ ಅತ್ಯದ್ಭುತವಾಗಿ ತೋರಿಸಿದ್ದಾರೆ. ಅಲ್ಲದೆ ಕಲ್ಕಿ ಸಿನಿಮಾವು ಮ್ಯಾಡ್ ಮ್ಯಾಕ್ಸ್ ಚಿತ್ರಗಳ ದೃಶ್ಯದಿಂದ ಸ್ಫೂರ್ತಿ ಪಡೆದಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೂ ಸಿನಿಮಾದ ಕ್ಲೈಮ್ಯಾಕ್ಸ್ ವಿಭಿನ್ನ ಎನ್ನಿಸುತ್ತದೆ. ಏಕೆಂದರೆ ಸೆಟ್ಗಳ ನಿರ್ಮಾಣ ವಿನ್ಯಾಸವು ಮುಂದಿನ ಭಾಗದ ಕಥೆಗೆ ಕುತೂಹಲ ಹುಟ್ಟಿಸುವಂತೆ ನಾಗ್ ಅಶ್ವಿನ್ ಚೆನ್ನಾಗಿ ಹೆಣೆದಿದ್ದಾರೆ ಎಂದರು.
ವಾಸ್ತವವಾಗಿ, ಸುಮತಿ ಪಾತ್ರಧಾರಿ ದೀಪಿಕಾಗೆ ಹುಟ್ಟಲಿರುವ ಮಗುವನ್ನು ರಕ್ಷಿಸಲು ಹೊರಟಿರುವ ಅಶ್ವತ್ಥಾಮನ ಪಾತ್ರವನ್ನು ಅಮಿತಾಭ್ ನಿರ್ವಹಿಸಿದ್ದಾರೆ. ಆದರೆ ಚಿತ್ರದಲ್ಲಿ ದೊಡ್ಡ ಟ್ವಿಸ್ಟ್ ಎಂದರೆ ಪ್ರಭಾಸ್ ರೂಪದಲ್ಲಿ ಬಂದಿರುವುದು. ಪ್ರಭಾಸ್ ಕರ್ಣನ ಪುನರ್ಜನ್ಮ ಎಂದು ಸಿನಿಮಾದ ಅಂತಿಮದಲ್ಲಿ ಬಹಿರಂಗಪಡಿಸಲಾಗಿದೆ. ಇದರಿಂದ ನಾಗ್ ಅಶ್ವಿನ್ ನನಗೆ ಮಹಾಭಾರತದ ಹೊಸ ರೂಪ ತೋರಿಸಿದ್ದಾರೆ ಎನ್ನಿಸುತ್ತದೆ ಎಂದಿದ್ದಾರೆ.
ಕಲ್ಕಿ 2898 ಎಡಿಯ ಸೀಕ್ವೆಲ್ನಲ್ಲಿ ಪ್ರಭಾಸ್ ಪಾತ್ರ ಬಗ್ಗೆ ನಿತೀಶ್ ಭವಿಷ್ಯ ನುಡಿದಿದ್ದಾರೆ. ಅಶ್ವತ್ಥಾಮ ಮತ್ತು ಕೃಷ್ಣ ವಿಮೋಚನೆಯ ಹಾದಿಯನ್ನು ತೋರಿಸಿದರೂ ಖಳನಾಯಕನನ್ನು ಒಪ್ಪಿಕೊಳ್ಳುವ ಮಹಾದಾಸೆಯಿಂದ ಕರ್ಣ (ಪ್ರಭಾಸ್) ಸಾಯುತ್ತಾನೆ ಎಂದು ಹೇಳಿದ್ದಾರೆ. ಅಲ್ಲದೆ ಇತ್ತೀಚಿನ ಸಂದರ್ಶನದಲ್ಲಿ ನಿರ್ದೇಶನಕ ನಾಗ್ ಅಶ್ವಿನ್ ಸಿನಿಮಾದಲ್ಲಿ ಕೃಷ್ಣನ ಪಾತ್ರವನ್ನು ಹಾಗೆ ಮುಂದುವರಿಸುವುದಾಗಿ ತಿಳಿಸಿದ್ದರು. ಯಾವುದೇ ನಟನನ್ನು ಕೃಷ್ಣಪಾತ್ರಧಾರಿಯಾಗಿ ಮುಂದುವರಿಸುವುದಿಲ್ಲ ಎಂದಿದ್ದರು. ಅದಕ್ಕೆ ನಿತೀಶ್ ಅವರು ಕೃಷ್ಣನ ಮುಖವನ್ನು ಮರೆಮಾಡುವ ಅಗತ್ಯವಿಲ್ಲ; ನಾನು ಲಭ್ಯವಿದ್ದೇನೆ ಎಂದು ಲೇವಡಿ ಮಾಡಿದ್ದಾರೆ. (ಏಜೆನ್ಸೀಸ್)