

ಚಿತ್ರದುರ್ಗ: ಪಕ್ಕದ ಮನೆಯವರ ಜತೆ ಜಗಳವಾಡಿದ್ದ ವ್ಯಕ್ತಿಯ ಮರ್ಯಾದೆ ಬೀದಿಪಾಲಾಗಿದೆ. ಏಕೆಂದರೆ ಆತ ಸ್ನಾನಕ್ಕೆ ಹೋಗಿದ್ದರೂ ಹಾಗೇ ರಸ್ತೆಯಲ್ಲಿ ನಡೆಸಿಕೊಂಡು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಕೋಟೆನಾಡು ಚಿತ್ರದುರ್ಗದಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ವೇಣುಗೋಪಾಲ ಎಂಬಾತ ಪಕ್ಕದ ಮನೆಯವರ ಜತೆ ಜಗಳವಾಡಿದ್ದಕ್ಕೇ ಇಷ್ಟೆಲ್ಲ ರಾದ್ಧಾಂತವಾಗಿದೆ. ವಿಗ್ರಹ ವ್ಯಾಪಾರಿ ಆಗಿರುವ ಈತ ರೌಡಿಶೀಟರ್ ಕೂಡ ಆಗಿರುತ್ತಾನೆ.
ಪಕ್ಕದ ಮನೆಯವರ ಜತೆ ಜಗಳವಾಡಿದ್ದಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಈತನ ಮನೆಗೆ ತೆರಳಿದ್ದ ಪೊಲೀಸರು, ವೇಣುಗೋಪಾಲ್ ಸ್ನಾನಕ್ಕೆ ಹೋಗಿದ್ದ ಎಂದರೂ ಕೇಳದೆ ಹಾಗೇ ಠಾಣೆಗೆ ಕರೆದೊಯ್ದಿದ್ದಾರೆ. ಹೆಡ್ ಕಾನ್ಸ್ಟೆಬಲ್ ಚಂದ್ರ ನಾಯ್ಕ್ ಈತನನ್ನು ರಸ್ತೆಯಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿಸಿಕೊಂಡು ಠಾಣೆಗೆ ಕರೆತಂದಿದ್ದಾರೆ.
ಪೊಲೀಸರು ಈತನನ್ನು ಅರೆಬೆತ್ತಲೆಯಾಗಿಸಿ ರಸ್ತೆಯಲ್ಲಿ ಕರೆದೊಯ್ದ ದೃಶ್ಯದ ವಿಡಿಯೋ ವೈರಲ್ ಆಗಿದೆ. ಪಿಎಸ್ಐ ಮಹೇಶ್ ಮತ್ತು ಸಿಬ್ಬಂದಿ ಅನಾಗರಿಕವಾಗಿ ವರ್ತಿಸಿದ್ದಾರೆ ಎಂದು ವೇಣುಗೋಪಾಲ್ ಆರೋಪ ಮಾಡಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.