ಪೊಲೀಸ್​ ಇನ್​ಸ್ಪೆಕ್ಟರ್ ಸೊಂಟಕ್ಕೇ ಕೈ ಹಾಕಿ ವಾಕಿಟಾಕಿ ಕದ್ದ ಖತರ್ನಾಕ್​ ಕಳ್ಳ..!

Police
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಸಾಮಾನ್ಯವಾಗಿ ಕಳ್ಳರು ಪೊಲೀಸರನ್ನು ಕಂಡರೆ ಓಡಿಹೋಗುತ್ತಾರೆ ಇಲ್ಲವೇ ತಲೆಮರೆಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಖತರ್ನಾಕ್​ ಕಳ್ಳ ಪೊಲೀಸ್ ಇನ್​​ಸ್ಟೆಕ್ಟರ್​ವೊಬ್ಬರ ಸೊಂಟಕ್ಕೇ ಕೈ ಹಾಕಿ ವಾಕಿಟಾಕಿಯನ್ನು ಕದ್ದಿದ್ದಾನೆ. ವಾಕಿಟಾಕಿ ಎಲ್ಲೂ ಪತ್ತೆಯಾಗದ್ದರಿಂದ ಆ ಇನ್​​ಸ್ಪೆಕ್ಟರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಎಸ್​.ಜೆ. ಪಾರ್ಕ್​ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ಶಿವಕುಮಾರ್ ವಾಕಿಟಾಕಿ ಕಳೆದುಕೊಂಡವರು. ಸೆ. 27ರಂದು ಕೃಷಿ ಕಾಯ್ದೆ ವಿರೋಧಿಸಿ ನಡೆದಿದ್ದ ಭಾರತ್​ ಬಂದ್​ ವೇಳೆ ಈ ಕಳ್ಳತನ ಮಾಡಲಾಗಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ಪುರಭವನ ಮುಂಭಾಗ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭವನ್ನು ನಿಭಾಯಿಸಲು ಇನ್​ಸ್ಪೆಕ್ಟರ್ ನಿಯೋಜನೆಗೊಂಡಿದ್ದರು.

ರೈತ ಸಂಘಟನೆಗಳ ಸದಸ್ಯರು ಪ್ರತಿಭಟನೆ-ಜಾಥಾ ನಡೆಸಿದ ಸಂದರ್ಭದಲ್ಲಿ ಜನಜಂಗುಳಿ ಉಂಟಾಗಿದ್ದು, ರಸ್ತೆ ತಡೆಗೆ ಮುಂದಾಗಿದ್ದ ಗುಂಪನ್ನು ಪೊಲೀಸರು ನಿಯಂತ್ರಿಸಲು ಹೋದಾಗ ಕಳವು ಮಾಡಲಾಗಿದೆ.

ಬೆಲ್ಟ್​​ಗೆ ಸಿಕ್ಕಿಸಿಕೊಂಡಿದ್ದ ವಾಕಿಟಾಕಿಯನ್ನು ಜನಜಂಗುಳಿಯಲ್ಲಿದ್ದ ಇನ್​ಸ್ಪೆಕ್ಟರ್​ಗೆ ಗೊತ್ತೇ ಆಗದಂತೆ ಕಳ್ಳ ಎಗರಿಸಿದ್ದ. ಇನ್​ಸ್ಪೆಕ್ಟರ್ ಮಾಹಿತಿ ರವಾನೆಗೆಂದು ಸೊಂಟಕ್ಕೆ ಕೈ ಹಾಕಿದಾಗ ವಾಕಿಟಾಕಿ ನಾಪತ್ತೆ ಆಗಿರುವುದು ಅರಿವಿಗೆ ಬಂದಿತ್ತು. ಎಲ್ಲ ಕಡೆ ಹುಡುಕಾಡಿದರೂ ವಾಕಿಟಾಕಿ ಪತ್ತೆಯಾಗದ ಕಾರಣ ಅವರು ಎಸ್​.ಜೆ.ಪಾರ್ಕ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net