

ಚಿಕ್ಕೋಡಿ: ಮದುವೆ ಮಾಡಿಕೊಂಡು ಹೊಸ ಜೀವನದ ಹೊಸ್ತಿಲು ದಾಟಿದ ಖುಷಿಯಲ್ಲಿದ್ದ ಈ ದಂಪತಿಗೆ ಮದುವೆಯಾಗಿದ್ದಕ್ಕೇ ಪೊಲೀಸ್ ಕೇಸ್ ಎದುರಿಸುವಂತಾಗಿದೆ. ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ಬೆನ್ನಿಗೇ ಈ ಸತಿ-ಪತಿ ಇಬ್ಬರ ಮೇಲೂ ಮೊಕದ್ದಮೆ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಭೀಮ ನಗರದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಈ ಮದುವೆ ನಡೆದಿದ್ದು, ಇವರ ಮೇಲೆ ಕೇಸ್ ದಾಖಲಾಗಿರುವುದಷ್ಟೇ ಅಲ್ಲ, ಇವರು ಮದುವೆ ಮಾಡಿಕೊಂಡಿರುವ ಅಂಬೇಡ್ಕರ್ ಭವನವನ್ನೂ ಸೀಲ್ ಡೌನ್ ಮಾಡಲಾಗಿದೆ. ನವದಂಪತಿ ಮಾತ್ರವಲ್ಲದೆ, ಎರಡೂ ಕುಟುಂಬಗಳ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಕರೊನಾ ಹಾವಳಿ ಅಧಿಕವಾಗಿರುವ ಸಂದರ್ಭದಲ್ಲಿ ಇವರು ಕೋವಿಡ್ ಮಾರ್ಗಸೂಚಿಗಳನ್ನು ಮೀರಿ, ಅದ್ದೂರಿಯಾಗಿ ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಮೊಕದ್ದಮೆ ದಾಖಲಾಗಿದೆ. ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಜತೆಯಾಗಿ ದಾಳಿ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.