

ಮುಂಬೈ: ಈ ಯುವತಿಯ ಜನ್ಮದಿನಾಚರಣೆಗೆ ಈ ಸಲ ಖಾಕಿ ಖದರ್ ಬಂದಿತ್ತು. ಕಾರಣ, ಈಕೆಯ ಬರ್ತ್ಡೇಯನ್ನು ಪೊಲೀಸರೂ ಸೆಲೆಬ್ರೇಟ್ ಮಾಡಿದ್ದಾರೆ. ಅಲ್ಲದೆ ಇವರ ಮನೆಗೇ ಕೇಕ್ ಕೂಡ ಕಳುಹಿಸಿಕೊಟ್ಟಿರುವ ಪೊಲೀಸರು ಜನ್ಮದಿನದ ಶುಭಾಶಯ ಕೋರಿದ್ದಾರೆ. ಮಾತ್ರವಲ್ಲ ಈಕೆಗೆ 'ಜವಾಬ್ದಾರಿಯುತ ನಾಗರಿಕ' ಎಂಬ ಬಿರುದನ್ನೂ ನೀಡಿದ್ದಾರೆ.
ಹೀಗೆ ಪೊಲೀಸರಿಂದಲೂ ಬರ್ತ್ಡೇ ಶುಭಾಶಯ ಪಡೆದುಕೊಂಡು ಕೇಕ್ ಕೂಡ ಪಡೆದ ಯುವತಿಯ ಹೆಸರು ಸಮತಾ ಪಾಟೀಲ್. ಈಕೆಯನ್ನು ಟ್ವಿಟರ್ನಲ್ಲಿ ಡಿಎಂ ಮಾಡಿ ಸಂಪರ್ಕಿಸಿದ ಪೊಲೀಸರು, ಮೊಬೈಲ್ಫೋನ್ ನಂಬರ್ ಪಡೆದು, ಅದನ್ನು ಸ್ಥಳೀಯ ಪೊಲೀಸರಿಗೆ ರವಾನಿಸಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು ಈಕೆಯ ಮನೆಗೆ ಕೇಕ್ ತಲುಪಿಸಿ, ಜನ್ಮದಿನದ ಶುಭಾಶಯ ಕೋರಿದ್ದಾರೆ.
ಅಷ್ಟಕ್ಕೂ ಈಕೆ ಗೆಳೆಯರಿಗೆ ಬರ್ತ್ಡೇ ಟ್ರೀಟ್ ನೀಡಲು ನಿರಾಕರಿಸಿದ್ದಕ್ಕೆ ಈಕೆಗೆ ಪೊಲೀಸರಿಂದ ಟ್ರೀಟ್ ಸಿಕ್ಕಿದೆ. ಹೊರಗೆ ಬಾ, ಬರ್ತ್ಡೇ ಟ್ರೀಟ್ ಕೊಡು ಎಂದು ಫ್ರೆಂಡ್ಸ್ ಕೇಳಿದ್ದಕ್ಕೆ, ಈಕೆ ಲಾಕ್ಡೌನ್ ಇದೆ, ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಪ್ರತಿಕ್ರಿಯಿಸಿದ್ದಾರೆ. 'ಯಾರು ತಮ್ಮ ಸ್ನೇಹಿತರನ್ನು ಮನೆಯಲ್ಲೇ ಇರಲು ಬಯಸಿದ್ದೀರಿ' ಎಂದು ಟ್ವೀಟ್ ಮಾಡಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಮತಾ, ಗೆಳೆಯರು ಟ್ರೀಟ್ ಕೇಳಿದರೂ ನಾನು ಮನೆಯಿಂದ ಹೊರಗೆ ಹೋಗಿಲ್ಲ. ಅವರನ್ನು ಮನೆಯಲ್ಲೇ ಸುರಕ್ಷಿತವಾಗಿ ಇರಲು ಹೇಳಿದ್ದೆ ಎಂದಿದ್ದರು. ಈ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿದಕ್ಕೆ ಖುಷಿಯಾದ ಮುಂಬೈ ಪೊಲೀಸರು, 'ರೆಸ್ಪಾನ್ಸಿಬಲ್ ಸಿಟಿಜನ್' ಎಂದು ಬರೆಸಿದ್ದ ಕೇಕ್ ಸಮತಾಗೆ ಕಳುಹಿಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ. (ಏಜೆನ್ಸೀಸ್)