

ವಿಜಯನಗರ: ಹೊಸಪೇಟೆಯ ರಾಣಿಪೇಟೆಯಲ್ಲಿ ಮನೆಯೊಂದಕ್ಕೆ ಖರೀದಿದಾರರ ಸೋಗಿನಲ್ಲಿ ಬಂದು ಕೊಲೆ ಮಾಡಿದ್ದಲ್ಲದೆ, ದರೋಡೆ ಮಾಡಿಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ಆಗಿದೆ. ಈ ಬಗ್ಗೆ ವಿಜಯನಗರ ಎಸ್ಪಿ ಡಾ. ಕೆ. ಅರುಣ್ ಮಾಹಿತಿ ನೀಡಿದ್ದಾರೆ.
ಹೊಸಪೇಟೆಯ ರಾಣಿಪೇಟೆಯಲ್ಲಿ ಅ. 22ರಂದು ಸೀರೆ ಖರೀದಿದಾರರ ಸೋಗಿನಲ್ಲಿ ವೃದ್ಧೆ ಭುವನೇಶ್ವರಿ (68) ಎಂಬವರ ಮನೆಗೆ ಬಂದಿದ್ದ ಇಬ್ಬರು ಮಹಿಳೆಯರು ಹಾಗೂ ನಾಲ್ವರು ಪುರುಷರು, ಬಳಿಕ ಆಕೆಯನ್ನು ಕೊಲೆ ಮಾಡಿ, ದರೋಡೆ ಮಾಡಿಕೊಂಡು ಪರಾರಿ ಆಗಿದ್ದರು. ಈ ಪ್ರಕರಣ ಅಂದು ಜಿಲ್ಲೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಆತಂಕವನ್ನೂ ಮೂಡಿಸಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಿಳಿದು ಈ ಹಿಂದೆ ಐವರನ್ನು ಬಂಧಿಸಿದ್ದು, ಇದೀಗ ಮತ್ತೊಬ್ಬ ಆರೋಪಿಯನ್ನೂ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಹಾವೇರಿಯ ರಾಣೆಬೆನ್ನೂರಿನ ನೌಶಾದ್ ಅಲಿ ಅಲಿಯಾಸ್ ಶಂಶುದ್ದೀನ್ ಬಂಧಿತ ಆರೋಪಿ. ಬಂಧಿತನಿಂದ 4,80,000 ಮೌಲ್ಯದ 160 ಗ್ರಾಂ ಬಂಗಾರ ಮತ್ತು 40 ಸಾವಿರ ರೂ. ಹಣ ವಶಕ್ಕೆ ಪಡೆಯಲಾಗಿದೆ ಎಂದು ವಿಜಯನಗರ ಎಸ್ಪಿ ಡಾ.ಕೆ. ಅರುಣ್ ತಿಳಿಸಿದ್ದಾರೆ.