ಓದಿದ್ದು ಟಿಸಿಎಚ್, ಹೇಳ್ಕೊಂಡಿದ್ದು ಡಾಕ್ಟರ್; ನಕಲಿ ಔಷಧ ಕೊಟ್ಟು ಯುವಕನ ಬಲಿ ಪಡೆದವನಿಗೆ ಈಗ ಜೈಲಲ್ಲೇ 'ಟ್ರೀಟ್​ಮೆಂಟ್​..'

Arrest
Published on

ಹೊಸೂರು: ಆತ ಓದಿದ್ದು ಟಿಸಿಎಚ್, ಬೋರ್ಡ್ ಹಾಕಿಕೊಂಡಿದ್ದು ಎಂಬಿಬಿಎಸ್. ಟಿಸಿಎಚ್ ಮಾಡಿ ಶಾಲಾ ಶಿಕ್ಷಕ ವೃತ್ತಿ ಮಾಡಬೇಕಿದ್ದವನು ಸ್ಟೆತೊಸ್ಕೋಪ್ ಹಾಕಿಕೊಂಡು ಮಾತ್ರೆಗಳನ್ನು ಕೊಡುತ್ತಿದ್ದ. ಇವನ ಕೃತ್ಯಕ್ಕೆ ಯುವಕನೊಬ್ಬ ಬಲಿಯಾಗಿದ್ದು, ಈತನಿಗೆ ಇದೀಗ ಜೈಲಲ್ಲೇ ಟ್ರೀಟ್​ಮೆಂಟ್ ಎನ್ನುವಂತಾಗಿದೆ.

ಇದು ಯಾವುದೋ ಸಿನಿಮಾ ಕಥೆಯಂತೆ ಕಂಡರೂ ಇಂಥದ್ದೊಂದು ಪ್ರಕರಣ ಸೋಮವಾರ ಹೊಸೂರು ಸಮೀಪದ ನಾಚಿಕುಪ್ಪಂನಲ್ಲಿ ಬೆಳಕಿಗೆ ಬಂದಿದೆ. ನಕಲಿ ಡಾಕ್ಟರ್ ಕೊಟ್ಟ ಮಾತ್ರೆ ಸೇವಿಸಿದ ಬೆಂಗಳೂರಿನ ನಿವಾಸಿ ಪ್ರಭಾಕರ(28) ಕೊನೆಯುಸಿರೆಳೆದಿದ್ದಾನೆ. ನಕಲಿ ಡಾಕ್ಟರ್ ದೇವರಾಜ್ (42) ಜೈಲಿನ ಕಂಬಿ ಹಿಂದೆ ಪೊಲೀಸರ ಟ್ರೀಟ್​​ಮೆಂಟ್​ನಲ್ಲಿದ್ದಾನೆ.

ಕ್ರಿಸ್ಮಸ್ ರಜೆಗೆ ಬಂದಿದ್ದ ಯುವಕ: ಬೆಂಗಳೂರಿನ ನಿವಾಸಿ ಪ್ರಭಾಕರ ಎಂಬಾತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಎರಡು ದಿನದ ಹಿಂದೆ ಸ್ವಗ್ರಾಮ ನಾಚಿಕುಪ್ಪಂಗೆ ಬಂದಿದ್ದ. ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿದ್ದರಿಂದ ಅದೇ ಗ್ರಾಮದಲ್ಲಿ ವೈದ್ಯ ಎನಿಸಿಕೊಂಡಿದ್ದ ದೇವರಾಜ್ ಎಂಬಾತನ ಬಳಿ ಚಿಕಿತ್ಸೆಗೆ ತೆರಳಿದ್ದ. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯ ಕೆಲವೊಂದು ಮಾತ್ರೆಗಳನ್ನು ನೀಡಿ ಸರಿಹೋಗುತ್ತದೆ ಎಂದು ಹೇಳಿ ಕಳುಹಿಸಿದ್ದ ಎನ್ನಲಾಗಿದೆ. ಮಾತ್ರೆ ಸೇವಿಸಿದ ಕೆಲ ಹೊತ್ತಿನ ಬಳಿಕ ಪ್ರಜ್ಞಾಹೀನನಾದ ಪ್ರಭಾಕರ್‌ನನ್ನು ಕುಟುಂಬದವರು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಪ್ರಭಾಕರ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಕೂಡಲೇ ಬಂಧನ: ಪ್ರಭಾಕರ್ ಸಾವಿಗೆ ನಕಲಿ ವೈದ್ಯ ನೀಡಿದ ಮಾತ್ರೆಗಳೇ ಕಾರಣ ಎಂದು ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾಹಿತಿ ಆಧರಿಸಿದ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆ ವೇಳೆ ಆತ ಟಿಸಿಎಚ್ ಮಾಡಿ ವೈದ್ಯನ ಸೋಗಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಎಫ್​ಐಅರ್ ದಾಖಲಿಸಿ ನಕಲಿ ವೈದ್ಯನನ್ನು ಜೈಲಿಗೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net