

ಬೆಂಗಳೂರು: ನಟಿ ಅದಿತಿ ಪ್ರಭುದೇವ ಇದೀಗ ಬ್ಯಾಚೆಲರ್ ಜೀವನದಿಂದ ಹೊರಬರುವ ಸಿದ್ಧತೆಯಲ್ಲಿ ಯಶಸ್ವಿಯಾಗಿದ್ದಾರೆ. ಅರ್ಥಾತ್, ಅವರಿಗೆ ಕಂಕಣ ಬಲ ಕೂಡಿಬಂದಿದ್ದು, ತಾವು ಎಂಗೇಜ್ ಆಗಿರುವ ಕುರಿತು ಫೋಟೋ ಸಹಿತ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ತಾವು ಮದುವೆ ಆಗಲಿರುವ ಹುಡುಗನ ಜೊತೆಗಿನ ಫೋಟೋ ಹಂಚಿಕೊಂಡು 'ಕನಸಿನ ಹಾಗೆ ನನಸಾದ ಕನಸು' ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ, 'ಎಂಗೇಜ್ಡ್' ಎಂದು ಹಾಕುವ ಮೂಲಕ ತಾವು ಮದುವೆ ಆಗಲಿರುವ ಕುರಿತು ಸುಳಿವು ಬಿಟ್ಟುಕೊಟ್ಟಿದ್ದಾರೆ.
ದಾವಣಗೆರೆ ಮೂಲದ ಅದಿತಿ ಮೊದಲು 'ನಾಗಕನ್ನಿಕೆ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದು, ನಂತರ ಧೈರ್ಯಂ ಸಿನಿಮಾ ಮೂಲಕ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು. 'ಸಿಂಗ', 'ಬಜಾರ್', 'ರಂಗನಾಯಕಿ', 'ಬ್ರಹ್ಮಚಾರಿ' ಮತ್ತು ಈಗ ಬಿಡುಗಡೆಯಾಗಿರೋ 'ಆನ' ಚಿತ್ರದಲ್ಲಿ ಅದಿತಿ ನಟಿಸಿದ್ದಾರೆ. ಅದಲ್ಲದೆ ಇನ್ನೂ ಕೆಲವು ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಂದಹಾಗೆ ಅವರು ಮದುವೆ ಆಗಲಿರುವ ಹುಡುಗ ಉದ್ಯಮಿಯಾಗಿದ್ದು, ಅವರ ಹೆಸರು 'ಯಶಸ್' ಎನ್ನಲಾಗಿದೆ. ಅವರು ಚಿಕ್ಕಮಗಳೂರಿನಲ್ಲಿ ಕಾಫಿ ಪ್ಲ್ಯಾಂಟರ್.