

ವಿಜಯನಗರ: ಈ ವಾಂತಿಗೇ ಒಂದೂವರೆ ಕೋಟಿ ರೂಪಾಯಿ ಬೆಲೆ!
ಹೌದು.. ಇಷ್ಟೊಂದು ಬೆಲೆಬಾಳುವ ವಾಂತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಷ್ಟೇ ಅಲ್ಲ, ಇದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ವಿಜಯನಗರ ಜಿಲ್ಲಾ ಪೊಲೀಸರು ಇಂಥದ್ದೊಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.
ಕೊಪ್ಪಳದ ವೆಂಕಟೇಶ್ ನಾಯ್ಕ್, ಅಬ್ದುಲ್ ವಹಾಬ್, ಭಟ್ಕಳದ ಗಣಪತಿ, ಹುಬ್ಬಳ್ಳಿಯ ಪುಂಡಲೀಕ, ಮಹೇಶ್ ಮತ್ತು ವಿಜಯಪುರದ ಶ್ರೀಧರ್ ಬಂಧಿತ ಆರೋಪಿಗಳು. ಇವರನ್ನು ಹೊಸಪೇಟೆ ಪೊಲೀಸರು ಬಂಧಿಸಿದ್ದು, ಇವರ ವಿರುದ್ಧ ಹೊಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ತಿಮಿಂಗಿಲದ ವಾಂತಿ ಮಾರಾಟ ಮಾಡುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಆರೋಪಿಗಳ ಬಳಿ ಒಂದೂವರೆ ಕೆ.ಜಿ.ಯಷ್ಟು ತಿಮಿಂಗಿಲದ ವಾಂತಿ ಸಿಕ್ಕಿದ್ದು, ಇದರ ಬೆಲೆ ಸುಮಾರು ಒಂದೂವರೆ ಕೋಟಿ ರೂಪಾಯಿ ಎಂದು ಪೊಲೀಸರು ಅಂದಾಜಿಸಿದ್ದಾರೆ.