

ವಿಜಯನಗರ: ಒಟ್ಟು 25 ಬೈಕ್ಗಳನ್ನು ಕಳವು ಮಾಡಿರುವ ನಾಲ್ವರು ವಾಹನಗಳ್ಳರನ್ನು ವಿಜಯನಗರ ಜಿಲ್ಲೆ ಹೊಸಪೇಟೆ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ಐದು ಲಕ್ಷ ರೂಪಾಯಿ ಮೌಲ್ಯದ 25 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಆಗಸ್ಟ್ 29ರಂದು ಸಿಕ್ಕಿಬಿದ್ದಿದ್ದ. ಕದ್ದ ವಾಹನಗಳ ತಪಾಸಣೆ ಸಲುವಾಗಿ ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಈ ಆರೋಪಿ ಓಡಿಹೋಗಲು ಯತ್ನಿಸಿದ್ದು, ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹಲವಾರು ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನೂ ಮೂವರು ಆರೋಪಿಗಳ ಮಾಹಿತಿಯೂ ಸಿಕ್ಕಿದೆ.
ಮೊದಲು ಸಿಕ್ಕ ಆರೋಪಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಉಳಿದ ಮೂವರು ಆರೋಪಿಗಳನ್ನೂ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಿದ್ದು, ಅವುಗಳಿಗೆ ಸಂಬಂಧಿಸಿದಂತೆ ಕೋರ್ಟ್ ಖರ್ಚು ನಿಭಾಯಿಸಲು ಇವರು ವಾಹನಗಳವು ಮಾಡುತ್ತಿದ್ದರು ಎಂಬುದು ಪೊಲೀಸರ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಷ್ಟು ತನಿಖೆ ನಡೆಯುತ್ತಿದೆ.