ಪ್ರಚಾರ ಕಣದಲ್ಲಿ ಇಂದಿನಿಂದ ಪ್ರಧಾನಿ ಮೋದಿ ಅಬ್ಬರ: ಇಂದು 3 ಪ್ರಚಾರಸಭೆ, ರಾಜಧಾನಿಯಲ್ಲಿ ರೋಡ್ ಶೋ

PM Modi
Published on

ಬೆಂಗಳೂರು: ವಿಧಾನಸಭೆ ಚುನಾವಣೆ ಕಣದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಬ್ಬರವಿರಲಿದೆ. ಒಂದೇ ದಿನ ಮೂರು ಕಡೆಗಳಲ್ಲಿ ಸಾರ್ವಜನಿಕ ಸಭೆ ಹಾಗೂ ರಾಜಧಾನಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಬಸವಣ್ಣನ ನೆಲ: ಸಾಮಾಜಿಕ ಕ್ರಾಂತಿಪುರುಷ ಬಸವೇಶ್ವರರ ನೆಲೆವೀಡು ಬೀದರ್ ಜಿಲ್ಲೆಯಿಂದಲೇ ಮೋದಿ ಪ್ರಚಾರದ ಕಣಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಬೀದರ್ ಜಿಲ್ಲೆಯ ಹುಮನಾಬಾದ್ ನಂತರ ವಿಜಯಪುರ ಜಿಲ್ಲಾ ಕೇಂದ್ರ ಹಾಗೂ ಬೆಳಗಾವಿ ಜಿಲ್ಲೆ ಕುಡಚಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಸವಣ್ಣನವರ ಸಾಮಾಜಿಕ ಸಮಾನತೆ ಕಾಳಜಿಯನ್ನು ನೆನಪಿಸುತ್ತಲೇ ರಾಜ್ಯ ಸರ್ಕಾರದ ಮೀಸಲು ಪರಿಷ್ಕರಣೆ ನಿರ್ಧಾರ, ‘ಡಬಲ್ ಇಂಜಿನ್ ಸರ್ಕಾರ’ದ ಮೇಲೆ ಫೋಕಸ್ ಮಾಡಲಿದ್ದಾರೆ ಎಂಬುದು ಪಕ್ಷದ ಹಿರಿಯ ನಾಯಕರೊಬ್ಬರ ವಿಶ್ಲೇಷಣೆ.

ಪ್ರಭಾವದ ಲೆಕ್ಕಾಚಾರ: ಮೋದಿಯವರ ಸಮಾವೇಶಗಳು ಸ್ಥಳ, ಸೀಟುಗಳ ಗಳಿಕೆ ಕೇಂದ್ರಿತವಾಗಿರುವುದಿಲ್ಲ. ರಾಜ್ಯದ ದೃಷ್ಟಿ, ಸುತ್ತಮುತ್ತಲ 9 ವಿಧಾನಸಭೆ ಕ್ಷೇತ್ರಗಳ ಮೇಲೆ ಪ್ರಭಾವಬೀರುವ ಲೆಕ್ಕಾಚಾರವಿದೆ. ಇದಕ್ಕೆ ಪೂರಕವಾಗಿ ಮೂರು ಪ್ರಚಾರ ಸಭೆಗಳ ವೇದಿಕೆಯನ್ನು ಮೋದಿ ಜತೆಗೆ ಈ ಕ್ಷೇತ್ರಗಳ ಅಭ್ಯರ್ಥಿಗಳು ಹಂಚಿಕೊಳ್ಳಲಿದ್ದು, ಆಸುಪಾಸಿನ ನಾಲ್ಕು ಕ್ಷೇತ್ರಗಳ ಜನರು ಭಾಗಿಯಾಗಲಿದ್ದಾರೆ.

ಬಿಸಿಲ ಬೇಗೆಯಿರುವ ಕಾರಣ 60-80 ಕಿ.ಮೀ. ವ್ಯಾಪ್ತಿಯೊಳಗಿನ ಜನರು, ಕಾರ್ಯಕರ್ತರು ಸೇರುವಂತೆ ನೋಡಿಕೊಳ್ಳಲಾಗುತ್ತಿದ್ದು, ಮೂರು ಸಭೆಗಳಿಗೆ ತಲಾ ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಂದೂವರೆ ಲಕ್ಷ ಜನರ ನಿರೀಕ್ಷೆ: ರಾಜಧಾನಿಯಲ್ಲಿ ಸಂಜೆ ಮೋದಿಯವರ ರೋಡ್ ಶೋ ನಡೆಯಲಿದ್ದು, ಮಾಗಡಿ ರಸ್ತೆಯ ನೈಸ್ ರಸ್ತೆ ಜಂಕ್ಷನ್​ನಿಂದ ಸುಮನಹಳ್ಳಿಯವರೆಗೆ ನಾಲ್ಕೂ ಮುಕ್ಕಾಲು ಕಿ.ಮೀ. ದೂರದವರೆಗೆ ರೋಡ್ ಶೋಗೆ ಪ್ಲಾ್ಯನ್ ಮಾಡಲಾಗಿದೆ. ಮೋದಿಯನ್ನು ಸ್ವಾಗತಿಸಲು 450 ಬ್ಲಾಕ್​ಗಳನ್ನು ರಚಿಸಲಾಗಿದೆ. ಕಾರ್ಯಕರ್ತರು, ಬೆಂಬಲಿಗರು ಸೇರಿ ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಯಲಹಂಕ-ನಾಲ್ಕು ವಾರ್ಡ್, ಯಶವಂತಪುರ- 15, ದಾಸರಹಳ್ಳಿ, ರಾಜರಾಜೇಶ್ವರಿ ನಗರ ತಲಾ ಆರು, ಬ್ಯಾಟರಾಯನಪುರ ಏಳು, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಹೆಬ್ಬಾಳದ ತಲಾ ಮೂರು ಮತ್ತು ಪುಲಕೇಶಿನಗರ ಕ್ಷೇತ್ರದ ಒಂದು ವಾರ್ಡ್​ನ ಜನರು ಪಾಲ್ಗೊಳ್ಳಲಿದ್ದಾರೆ.

ಎಲ್ಲೆಲ್ಲಿ ಪ್ರಚಾರ

* ಬೆಳಗ್ಗೆ 10: ಹುಮನಾಬಾದ್

* ಮಧ್ಯಾಹ್ನ 12 ವಿಜಯಪುರ

* ಮಧ್ಯಾಹ್ನ: 2 ಗಂಟೆಗೆ ಕುಡಚಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ.

* ಸಂಜೆ 3.30: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ರೋಡ್ ಶೋ

* ರಾಜಭವನದಲ್ಲಿ ವಾಸ್ತವ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net