More

    ಮಕ್ಕಳಿರಲವ್ವ ಮನೆತುಂಬ.. ಏನಂತಿಯವ್ವ…

    ಮಕ್ಕಳಿರಲವ್ವ ಮನೆತುಂಬ.. ಏನಂತಿಯವ್ವ…ಅದೊಂದು ಗ್ರಾಮೀಣ ಕುಟುಂಬ. ತಲೆತಲಾಂತರದಿಂದ ಕೃಷಿ ಮೂಲಕ ಜೀವನ ಕಟ್ಟಿಕೊಂಡವರು. ಈಗ ಎಪ್ಪತ್ತರಲ್ಲಿರುವ ಆ ಪಾಲಕರಿಗೆ ಒಟ್ಟು ಆರು ಮಕ್ಕಳು. ನಾಲ್ಕು ಗಂಡು, ಎರಡು ಹೆಣ್ಣು. ಈ ಆರರಲ್ಲಿ ಮೂವರಿಗೆ ತಲಾ ಇಬ್ಬರು ಮಕ್ಕಳು; ಇಬ್ಬರಿಗೆ ತಲಾ ಒಂದೊಂದೇ ಮಗು. ಒಬ್ಬ ಮಗನಿಗೆ ಮದುವೆಯಾಗಿಲ್ಲ. ಒಟ್ಟಾರೆಯಾಗಿ ಲೆಕ್ಕಹಾಕಿದರೆ ಎಂಟು ಮಕ್ಕಳು. ಅಂದರೆ ಒಂದೇ ತಲೆಮಾರಿನಲ್ಲಿ ಎಷ್ಟು ವ್ಯತ್ಯಾಸ. ಕೆಲ ಅಪವಾದಗಳನ್ನು ಹೊರತುಪಡಿಸಿದರೆ ಈ ಚಿತ್ರಣ ಎಲ್ಲ ಕಡೆಗೂ ಕಂಡುಬರುತ್ತದೆ. ಕೆಲ ವರ್ಷಗಳ ಹಿಂದೆ ಹೀಗಿರಲಿಲ್ಲ. ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರವೇ ನಾನಾ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿತ್ತು; ಫ್ಯಾಮಿಲಿ ಪ್ಲಾನಿಂಗ್​ಗೆ ಉತ್ತೇಜನ ನೀಡುತ್ತಿತ್ತು. ಬಸ್ ಸ್ಟಾಪಿನ ಗೋಡೆಯಿಂದ ಹಿಡಿದು ಸರ್ಕಾರಿ ಕಚೇರಿಗಳ ಗೋಡೆವರೆಗೆ ಎಲ್ಲೆಲ್ಲೂ ‘ನಾವಿಬ್ಬರು ನಮಗಿಬ್ಬರು’ ‘ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ’ ಎಂಬಂಥ ಘೋಷಣೆಗಳು ರಾರಾಜಿಸುತ್ತಿದ್ದವು. ಈ ಘೋಷಣೆಗಳ ಅಬ್ಬರ ನಡೆದಿರುವಾಗ, ಮೂರ್ನಾಲ್ಕು ಮಕ್ಕಳನ್ನು ಹೊಂದಿದ ಪಾಲಕರು ಸಾರ್ವಜನಿಕವಾಗಿ ತುಸು ನಾಚಿಕೊಳ್ಳುವ ಸನ್ನಿವೇಶವೂ ಉದ್ಭವಿಸಿತ್ತು ಎನ್ನಿ. ಯಾವಾಗಾದರೊಮ್ಮೆ ತಂದೆತಾಯಿ ಮತ್ತು ಮಕ್ಕಳೆಲ್ಲ ಸೇರಿ ಬಸ್ಸಿಗೆ ಹೋಗುವಾಗ ಕಂಡಕ್ಟರ್ ಬೇಕಂತಲೇ, ‘ಒಂದು ಎರಡು ಮೂರು ನಾಲ್ಕು’ ಎಂದು ಎಣಿಸಿ ಮುಜುಗರ ತರುತ್ತಿದ್ದುದೂ ಇರುತ್ತಿತ್ತು. ಸಿನಿಮಾ ಟಾಕೀಸಿಗೆ ಹೋದರೂ ಗೇಟ್ ಕೀಪರ್ ಹೀಗೇ ಮಾಡುತ್ತಿದ್ದ. ಈ ನಡುವೆ, ಯಾರೂ ಹೇಳದೆ ಕೇಳದೆ ಇದ್ದರೂ, ಸರ್ಕಾರದವರು ಬೊಬ್ಬೆ ಹೊಡೆಯದಿದ್ದರೂ ‘ನಾವಿಬ್ಬರು ನಮಗೊಬ್ಬರು’ ಎಂಬ ಅಲಿಖಿತ ಘೋಷಣೆಯೊಂದು ತಣ್ಣಗೆ ಚಾಲ್ತಿಗೆ ಬಂದಿದ್ದು ಗೊತ್ತೇ ಆಗಲಿಲ್ಲ. ಇದನ್ನೆಲ್ಲ ಕಂಡ ಹಿರಿಯರು ‘ಹೀಗಾದ್ರೆ ಮನೆತನ ಮುಂದುವರಿಯೋದು ಹೇಗ್ರೋ’ ಎಂದು ಅಲವತ್ತುಕೊಂಡರಾದರೂ, ಅದನ್ನು ಕಿವಿಮೇಲೆ ಹಾಕಿಕೊಂಡವರು ಕಡಿಮೆ. ಇನ್ನು ಮುಂದೆ ‘ನಾವಿಬ್ಬರು ನಾವಿಬ್ಬರೇ’ಎಂಬ ಘೋಷಣೆ ಬರಬಹುದೇನೋ! ಈಗಲೇ ಹಳ್ಳಿ ಶಾಲೆಗಳನೇಕವು ಮಕ್ಕಳಿಲ್ಲದೆ ಭಣಗುಡುತ್ತಿವೆ. ಮುಂದೆ ಹೇಗೋ! ಇಷ್ಟೆಲ್ಲ ಹಕೀಕತ್ತು ಇರುವಾಗ, ಭಾರತದ ಜನಸಂಖ್ಯೆ ಕಮ್ಮಿಯಾಗಬೇಕಿತ್ತಲ್ಲ. ಏಕೆ ಜಗತ್ತಿನಲ್ಲೇ ಅಧಿಕ ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿದೆ?

    ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (ಯುಎನ್​ಎಫ್​ಪಿಎ) ವಿಶ್ವ ಜನಸಂಖ್ಯಾ ಸ್ಥಿತಿ (ಎಸ್​ಒಡಬ್ಲ್ಯುಪಿ) ವರದಿ ಈಚೆಗೆ ಬಿಡುಗಡೆಯಾಗಿ ಭಾರಿ ಸುದ್ದಿಯಾಗಿದ್ದು ನೆನಪಿರಬಹುದು. ಆ ವರದಿ ಪ್ರಕಾರ, ಜನಸಂಖ್ಯೆಯಲ್ಲಿ ಭಾರತ ಈಗ ನಂಬರ್ 1 ದೇಶವಾಗಿದೆ. ಚೀನಾ ಎರಡನೇ ಸ್ಥಾನಕ್ಕೆ ಹೋಗಿದೆ. ಭಾರತದ ಜನಸಂಖ್ಯೆ 142.86 ಕೋಟಿಯಷ್ಟಿದ್ದು, ಚೀನಾದ ಜನಸಂಖ್ಯೆ 142.57 ಕೋಟಿಯಷ್ಟಿದೆ. ಚೀನಾವನ್ನು ಭಾರತ ಹಿಂದಿಕ್ಕಿದ್ದು ಇದು ಮೊದಲ ಸಲ.

    ಯುವದೇಶ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ನಾಲ್ಕನೇ ಒಂದು ಭಾಗ 14 ವರ್ಷದೊಳಗಿನ ಮಕ್ಕಳಾದರೆ, ಶೇ. 68 ರಷ್ಟು ಮಂದಿ 15ರಿಂದ 64 ವಯೋಮಾನದವರು. 65 ವರ್ಷ ದಾಟಿದವರ ಸಂಖ್ಯೆ ಶೇ. 7. ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆ ಇದೇ ರೀತಿ ಸಾಗಿದರೆ 2050ರ ಹೊತ್ತಿಗೆ ಜನಸಂಖ್ಯೆ 166 ಕೋಟಿಗೆ ಏರುತ್ತದೆ. ಚೀನಾದ್ದು 131 ಕೋಟಿಗೆ ಇಳಿಯುತ್ತದೆ ಎಂದು ವಿಶ್ವಸಂಸ್ಥೆಯ ವರದಿ ಅಂದಾಜಿಸಿದೆ. ಈಗ ನಮ್ಮಲ್ಲಿ ಜನಸಂಖ್ಯೆ ಜಾಸ್ತಿ ಇರುವುದರಿಂದ ಇಳಿಕೆ ಸ್ಪಷ್ಟವಾಗಿ ಗೋಚರಿಸಲು ಸಮಯ ಹಿಡಿಯುತ್ತದೆ ಎಂಬುದು ತಜ್ಞರ ಸಮಜಾಯಿಷಿ. ಭಾರತದ ಜನಸಂಖ್ಯೆ 165 ಕೋಟಿ ಮುಟ್ಟಿದ ನಂತರ ಇಳಿಮುಖವಾಗಲಿದೆ ಎಂದು ಅಂದಾಜಿಸಲಾಗಿದೆ.

    ಭಾರತದಲ್ಲಿ ಜನಸಂಖ್ಯೆ ಮೂರು ದಶಕದಿಂದ ಏರುತ್ತಿದ್ದು, ಫಲವಂತಿಕೆ ಪ್ರಮಾಣ 2.0 ಇದೆ. ಇನ್ನೊಂದೆಡೆ, ಆರೋಗ್ಯ ವ್ಯವಸ್ಥೆಯಲ್ಲಿನ ಸುಧಾರಣೆಯ ಕಾರಣ ಶಿಶು ಮರಣ ಪ್ರಮಾಣದಲ್ಲಿ ಇಳಿಕೆ ಆಗಿದೆ. ಹೀಗಾಗಿ ಯುವ ಸಮುದಾಯದ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತದೆ. ಆದರೆ ಕೋವಿಡ್ ಕಾರಣದಿಂದಾಗಿ 2021ರಲ್ಲಿ ಗಣತಿ ನಡೆದಿಲ್ಲ. ಹೀಗಾಗಿ ನಮ್ಮದೇ ಆದ ಅಂಕಿಅಂಶಗಳು ಲಭ್ಯವಿಲ್ಲ.

    ಇದೇನೇ ಇದ್ದರೂ, ಭಾರತ ‘ಯುವದೇಶ’. ಯಾವುದೇ ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚಿಗೆಯಿದೆ ಎಂದರೆ, ಅಲ್ಲಿ ದುಡಿಯುವವರು ಅಧಿಕ ಪ್ರಮಾಣದಲ್ಲಿದ್ದಾರೆ ಎಂದರ್ಥ. ಇದರಿಂದ, ಕುಟುಂಬಕ್ಕೆ ಮಾತ್ರವಲ್ಲ, ಒಟ್ಟಾರೆಯಾಗಿ ದೇಶದ ಉತ್ಪಾದಕತೆ ಹಾಗೂ ಆದಾಯವೂ ಹೆಚ್ಚಲು ಅನುವಾಗುತ್ತದೆ. ಅಲ್ಲದೆ, ತಂತ್ರಜ್ಞಾನದಲ್ಲಿ ಇವರು ಎಕ್ಸ್​ಪರ್ಟ್ ಇರುವುದು ಪ್ಲಸ್ ಪಾಯಿಂಟ್.

    ಮಿತಿಮೀರಿದ ಜನಸಂಖ್ಯೆ ದೇಶದ ಪ್ರಗತಿಗೆ ಮಾರಕ ಎಂಬ ನೆಲೆಯಲ್ಲಿಯೇ ಜನಸಂಖ್ಯಾ ಸ್ಪೋಟಕ್ಕೆ ತಡೆಹಾಕುವ ಯತ್ನಗಳು ನಡೆದಿದ್ದು. ಆದರೆ ಈಗ ಜನಸಂಖ್ಯೆಯನ್ನೇ ‘ಮಾನವ ಸಂಪನ್ಮೂಲ’ ಎಂಬುದಾಗಿ ಪರಿಗಣಿಸಿ ಅದರ ಲಾಭ (ಡೆಮಾಗ್ರಫಿಕ್ ಡಿವಿಡೆಂಡ್) ಪಡೆಯುವ ನಿಟ್ಟಿನಲ್ಲಿ ತಜ್ಞರು ಸಲಹೆಗಳನ್ನು ಮುಂದಿಡುತ್ತಿದ್ದಾರೆ.

    ಮಾನವ ಸಂಪನ್ಮೂಲ ಅವಕಾಶವೂ ಹೌದು; ಸವಾಲೂ ಹೌದು. ಶಿಕ್ಷಣ ಪಡೆದು ಹೊರಬರುವ ಯುವಜನರಿಗೆ ಉದ್ಯೋಗ ಅವಕಾಶ ಒದಗಿಸುವುದು ಆಡಳಿತಗಾರರಿಗೆ ಬೃಹತ್ ಸವಾಲಾಗಿದೆ. ಕರ್ನಾಟಕವನ್ನೇ ತೆಗೆದುಕೊಂಡರೆ, ಪ್ರತಿ ವರ್ಷ ಸುಮಾರು 30 ಸಾವಿರ ಇಂಜಿನಿಯರ್​ಗಳು ತಯಾರಾಗುತ್ತಾರೆ. ಇವರಿಗೆಲ್ಲ ಕೆಲಸ ಸಿಗುವುದು ಸುಲಭವಲ್ಲ. ಈ ಸಲ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿಯಲ್ಲಿ ದಾಖಲೆಯ ಶೇ.71ರಷ್ಟು ಫಲಿತಾಂಶ ಬಂದಿದೆ. ಇದು ಖುಷಿಯೇ ಹೌದು. ಇದರಿಂದ ಈ ವರ್ಷ ಕಾಲೇಜುಗಳಲ್ಲಿ ಪ್ರವೇಶ ಪ್ರಮಾಣವೂ ಹೆಚ್ಚಬಹುದು. ಆದರೆ ಮುಂದಿನ ವರ್ಷಗಳಲ್ಲಿ ಇವರಲ್ಲಿ ಎಷ್ಟು ಮಂದಿಗೆ ಸೂಕ್ತ ಉದ್ಯೋಗ ದೊರೆಯಬಹುದು?

    ಇದರ ಜತೆಗೆ, ಅಪರಾಧಗಳಲ್ಲಿ ಯುವಜನರ ಭಾಗವಹಿಸುವಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ. ಪಂಜಾಬ್​ನಂತಹ ರಾಜ್ಯದಲ್ಲಿ ಮಾದಕವಸ್ತುಗಳ ದಾಸರಾಗಿ ಸಾವಿರಾರು ಯುವಜನರು ಭವಿಷ್ಯವನ್ನೇ ಹಾಳುಮಾಡಿಕೊಂಡಿದ್ದು ಕಣ್ಮುಂದೇ ಇದೆ. ದೂರದ ಪಂಜಾಬ್ ಏಕೆ, ಇಲ್ಲೇ ನಮ್ಮ ಬೆಂಗಳೂರಿನ ಕೆಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಆಸುಪಾಸು ಸಹ ಡ್ರಗ್ಸ್ ವ್ಯವಹಾರ ನಡೆಯುತ್ತದೆ ಎಂಬ ಮಾಹಿತಿ ಇರುವುದು ಈ ಸಮಸ್ಯೆಯ ಗಂಭೀರತೆಯನ್ನು ಸೂಚಿಸುತ್ತದೆ. ಇನ್ನು, ಮದ್ಯಪಾನ, ಧೂಮಪಾನದಂಥ ಚಟಗಳಿಗೆ ಜೋತುಬಿದ್ದವರು ಸಹ ಕಡಿಮೆ ಇಲ್ಲ. ಕೆಲ ಹೆಣ್ಣುಮಕ್ಕಳು ಸಹ ‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು’ ಎಂದು ಗುನುಗುವುದನ್ನು ಕೇಳಿದರೆ ತಲೆತಿರುಗದೆ ಇನ್ನೇನು!

    2020ಕ್ಕೆ ಹೋಲಿಸಿದರೆ 2021ರಲ್ಲಿ ಅಪ್ರಾಪ್ತರ ಮೇಲಿನ ಪ್ರಕರಣಗಳಲ್ಲಿ ಶೇ.4.7ರಷ್ಟು ಏರಿಕೆ ಕಂಡುಬಂದಿದೆ ಎಂದು ನ್ಯಾಷನಲ್ ಕ್ರೖೆಂ ರೆಕಾರ್ಡ್ಸ್ ಬ್ಯೂರೊ (ಎನ್​ಸಿಆರ್​ಬಿ) ವರದಿ ಹೇಳಿದೆ. ಇದು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳು. ಎಷ್ಟೋ ಪ್ರಕರಣಗಳು ದಾಖಲಾಗುವುದೇ ಇಲ್ಲ. ಹದಿಹರೆಯದಲ್ಲಿ ಆಕರ್ಷಣೆ ಸಹಜ. ಇದನ್ನೇ ಪ್ರೀತಿ ಎಂದು ತಪ್ಪಾಗಿ ಭಾವಿಸಿ, ಅನೇಕರು ದೈಹಿಕ ಸಂಬಂಧದವರೆಗೆ ಮುಂದುವರಿಯುತ್ತಾರೆ. ಪೋಸ್ಕೊ ಕಾಯ್ದೆ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯ ಜತೆ ಲೈಂಗಿಕ ಸಂಬಂಧ ಹೊಂದುವುದು (ಅದು ಪರಸ್ಪರ ಸಮ್ಮತವಾಗಿದ್ದರೂ ಸರಿಯೇ) ಅಪರಾಧ. ಈ ಸಂಗತಿ ಗೊತ್ತಾದಾಗ, ಕೆಲವರು ಹುಡುಗಿಯರ ಪಾಲಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಆಗ ಹುಡುಗನ ಮೇಲೆ ಪೋಸ್ಕೊ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಇದು ಬಿಗಿಯಾದ ಕಾನೂನಾಗಿರುವುದರಿಂದ ಅಷ್ಟು ಸುಲಭದಲ್ಲಿ ಜಾಮೀನು ಸಿಗುವುದಿಲ್ಲ. ಓದಿ ಸಾಧಿಸಬೇಕಾದ ವಯಸ್ಸಿನಲ್ಲಿ ಕಾನೂನು ಹೋರಾಟ ಮಾಡಬೇಕಾದ ಸನ್ನಿವೇಶ ಇವರಿಗೆ ಎದುರಾಗುತ್ತದೆ. ಈ ಕಾರಣಕ್ಕೆ ನಮ್ಮ ದೇಶದಲ್ಲಿ ಲೈಂಗಿಕ ಶಿಕ್ಷಣವನ್ನು ಜಾರಿಗೆ ತರಬೇಕೆಂಬ ಒತ್ತಾಯ ಕೆಲ ವಲಯಗಳಿಂದ ಕೇಳಿಬರುತ್ತಿದೆ.

    ಹಾಗಂತ, ಯುವಶಕ್ತಿ ಬಗ್ಗೆ ಎಲ್ಲವೂ ನಕಾರಾತ್ಮಕ ಎಂದು ಭಾವಿಸಬೇಕಿಲ್ಲ; ಸಕಾರಾತ್ಮಕ ಸಂಗತಿಗಳು ಒಂದು ತೂಕ ಜಾಸ್ತಿಯೇ ಇದೆ. ನಮ್ಮ ಯುವಕರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಿಗೇರುತ್ತಿದ್ದಾರೆ; ತಂತ್ರಜ್ಞಾನದಲ್ಲಿ ಅಗಾಧವಾದುದನ್ನು ಸಾಧಿಸುತ್ತಿದ್ದಾರೆ; ಸ್ಟಾರ್ಟಪ್​ಗಳ ಸ್ಥಾಪನೆಗೆ ಸೈ ಎನ್ನುತ್ತಿದ್ದಾರೆ; ಕೃಷಿಯಲ್ಲಿ ಸಹ ಆವಿಷ್ಕಾರಿ ಗುಣ ಪ್ರದರ್ಶಿಸುತ್ತಿದ್ದಾರೆ. ಹೀಗಿರುವಾಗ, ಯುವಶಕ್ತಿಯ ಸದ್ಬಳಕೆ ಪೂರ್ಣ ಪ್ರಮಾಣದಲ್ಲಿ ಆದರೆ ಇನ್ನಷ್ಟು ಸಾಧನೆ ಸಾಧ್ಯ ಎಂಬುದಷ್ಟೇ ಆಶಯ.

    ಭಾರತದಲ್ಲಿ ಜನಸಂಖ್ಯೆಯನ್ನು ಸಂಪನ್ಮೂಲವನ್ನಾಗಿ ಬಳಕೆ ಮಾಡಿಕೊಳ್ಳುವ ಅವಕಾಶವಿದೆ. 15ರಿಂದ 24 ವಯೋಮಾನದ 25.40 ಕೋಟಿ ಯುವ ಸಮುದಾಯದವರಿದ್ದು, ಸರಿಯಾದ ಶಿಕ್ಷಣ ಮತ್ತು ಸೂಕ್ತ ಮಾರ್ಗದರ್ಶನ ದೊರೆತಲ್ಲಿ ಇವರು ದೇಶದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಬಲ್ಲರು.

    | ಆಂಡ್ರಿಯಾ ವೋಜ್ನರ್ ಯುಎನ್​ಎಫ್​ಪಿಎ ಭಾರತ, ಭೂತಾನ್ ನಿರ್ದೇಶಕಿ

    ಚೀನಾ ತಾಕಲಾಟ: ಇನ್ನು, ಚೀನಾದತ್ತ ನೋಡಿದರೆ ಅಲ್ಲಿ ಬೇರೆಯದೇ ಸಮಸ್ಯೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲೆಂದು ಐದು ದಶಕದ ಹಿಂದೆ ಮಾವೋ ಜೆಡಾಂಗ್ ಆಡಳಿತದ ಕಾಲದಲ್ಲಿ ‘ಒಂದು ಕುಟುಂಬ ಒಂದು ಮಗು’ ನೀತಿಯನ್ನು ಅಲ್ಲಿ ಜಾರಿಗೆ ತರಲಾಯಿತು. ಕಮ್ಯುನಿಸ್ಟ್ ಆಡಳಿತವೆಂದ ಮೇಲೆ ಕೇಳಬೇಕೆ? ಶತಾಯಗತಾಯ ಜನಸಂಖ್ಯೆಯನ್ನು ತಗ್ಗಿಸಲೇಬೇಕೆಂದು ಕಠಿಣ ನಿಯಮಗಳನ್ನು ಜನರ ಮೇಲೆ ಹೇರಲಾಯಿತು. ಕುಟುಂಬಕ್ಕೆ ಒಂದೇ ಮಗು ನೀತಿಯಿಂದಾಗಿ ಗಂಡು ಮಗುವನ್ನು ಹೊಂದಲು ಹೆಚ್ಚು ಜನರು ಬಯಸಿದ್ದರಿಂದ ಗರ್ಭಪಾತದ ಪ್ರಮಾಣ ಹೆಚ್ಚಿತು. ಪರಿಣಾಮ ಹೆಣ್ಣು ಸಂತತಿ ಕಡಿಮೆ ಆಯಿತು. ಇದರಿಂದ ಕ್ರಮೇಣ ಚೀನಾದಲ್ಲಿ ಅವಿವಾಹಿತ ಪುರುಷರ ಸಂಖ್ಯೆ ಏರತೊಡಗಿತು. ಪರಿಸ್ಥಿತಿ ಎಲ್ಲಿಗೆ ತಲುಪಿತೆಂದರೆ, ಜನನ ಪ್ರಮಾಣ ಇಳಿಮುಖವಾಯಿತು. ಚೀನಾದಲ್ಲಿ ಫಲವಂತಿಕೆ ದರ 1.2 ಇದೆ. 14 ವರ್ಷದೊಳಗಿನವರ ಪ್ರಮಾಣ ಶೇ. 17, 15ರಿಂದ 64 ವಯೋಮಾನದವರ ಸಂಖ್ಯೆ ಶೇ. 69 ಮತ್ತು 65 ವರ್ಷ ಮೇಲ್ಪಟ್ಟವರ ಸಂಖ್ಯೆ ಶೇ. 14 ಇದೆ. ಅಂದರೆ ವಯಸ್ಸಾದವರ ಸಂಖ್ಯೆ 20 ಕೋಟಿಗೂ ಹೆಚ್ಚಿಗೆಯಿದೆ.

    ದುಡಿಮೆಯ ವಯೋಮಾನದವರ ಸಂಖ್ಯೆ ಕಡಿಮೆ ಆಗಿದ್ದರಿಂದ ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಬೀರಿತು. ಒಂದು ಕಾಲದಲ್ಲಿ ತನ್ನ ಮಾನವ ಸಂಪನ್ಮೂಲವನ್ನೇ ಬಳಸಿಕೊಂಡು ಚೀನಾ ಜಾಗತಿಕ ಉತ್ಪಾದನಾ ಹಬ್ ಆಗಿ ಹೊರಹೊಮ್ಮಿ, ಅಗಾಧ ಸಂಪತ್ತನ್ನು ಗುಡ್ಡೆಹಾಕಿತು. ಆದರೆ ಈಗ ಸನ್ನಿವೇಶ ಉಲ್ಟಾ. ಹೀಗಾಗಿ ‘ಒಂದು ಮಗು’ ನೀತಿಯನ್ನು 2013ರಲ್ಲಿ ಕೈಬಿಟ್ಟು, ಮೂರು ಮಕ್ಕಳ ನೀತಿಯನ್ನು ಅಳವಡಿಸಿಕೊಂಡಿದೆ. ಆದರೆ, ಬೆಲೆ ಏರಿಕೆಯ ಕಾರಣದಿಂದ ಚೀನಾದಲ್ಲಿ ಜೀವನನಿರ್ವಹಣೆ ಮಟ್ಟ ಯರಾ›ಬಿರ್ರಿ ಏರಿದ್ದು, ಯುವ ದಂಪತಿ ಮಕ್ಕಳನ್ನು ಹೊಂದಲು ಬಯಸುತ್ತಿಲ್ಲ ಎಂದು ಜನಸಂಖ್ಯಾ ತಜ್ಞರು ಬೊಟ್ಟುಮಾಡುತ್ತಾರೆ. ಜನನ ಪ್ರಮಾಣ ಹೆಚ್ಚಿಸಲು ಚೀನಾ ಸರ್ಕಾರ ಅನೇಕ ಸರ್ಕಸ್ ನಡೆಸುತ್ತಿದೆ. ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಕ್ಕೆ ತೆರಿಗೆಯಲ್ಲಿ ವಿನಾಯಿತಿ, ವಿವಿಧ ಬಗೆಯ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದೆ. ‘ಮಕ್ಕಳಿರಲವ್ವ ಮನೆತುಂಬ…’ ಎಂದು ಸರ್ಕಾರ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದರೂ ಜನರು ಯಾಕೋ ಮನಸ್ಸು ಮಾಡುತ್ತಿಲ್ಲ. ಜಾಗತಿಕ ಸೂಪರ್ ಪವರ್ ಆಗಬೇಕೆಂದು ಹಂಬಲಿಸುತ್ತಿರುವ ದೇಶದಲ್ಲಿ ವಯಸ್ಸಾದವರ ಸಂಖ್ಯೆಯೇ ಅಧಿಕವಾಗಿದ್ದರೆ ಮಾಡೋದೇನು?

    ಕೊನೇ ಮಾತು: ಕ್ಲಾಸಿನಲ್ಲಿ ಜನಸಂಖ್ಯೆ ಬಗ್ಗೆ ಪಾಠ ಮಾಡುತ್ತಿದ್ದ ಟೀಚರ್, ‘ಭಾರತದಲ್ಲಿ ಪ್ರತಿ ಹತ್ತು ಸೆಕೆಂಡಿಗೆ ಒಬ್ಬ ಮಹಿಳೆ ಒಂದು ಮಗುವನ್ನು ಹೆರುತ್ತಾಳೆ’ಎಂದು ಹೇಳಿದರು. ಒಬ್ಬ ಸರ್ದಾರ್ಜಿ ಕೂಡಲೇ ಎದ್ದುನಿಂತು, ‘ನಾವು ಆ ಮಹಿಳೆಯನ್ನು ಕೂಡಲೇ ಪತ್ತೆಹಚ್ಚಿ ಮಗುವನ್ನು ಹೆರದಂತೆ ಮಾಡಬೇಕು’ ಎಂದು ಸಲಹೆ ನೀಡಿದ. ಟೀಚರ್ ಕಕ್ಕಾಬಿಕ್ಕಿ. ಇದೊಂದು ಜೋಕು. ಆದರೆ ಜನಸಂಖ್ಯಾ ಸ್ಫೋಟ ಮತ್ತು ಜನಸಂಖ್ಯೆ ಇಳಿಕೆ ಎರಡೂ ಅಷ್ಟು ಸುಲಭದಲ್ಲಿ ನಿಭಾಯಿಸಬಹುದಾದ ವಿಷಯಗಳಲ್ಲ ಎಂಬುದಂತೂ ಖರೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!

    ಸಿಂಹವನ್ನೇ ಹೋಲುವ ಕರುವಿಗೆ ಜನ್ಮ ನೀಡಿದ ಹಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts