More

    ಸುಡಾನ್​ನಿಂದ 754 ಮಂದಿ ಸ್ವದೇಶಕ್ಕೆ ವಾಪಸ್: ಆಪರೇಷನ್ ಕಾವೇರಿ ಮೂಲಕ ಈವರೆಗೆ 1,360 ಭಾರತೀಯರ ರಕ್ಷಣೆ

    ನವದೆಹಲಿ: ಸಂಘರ್ಷ ಪೀಡಿತ ಸುಡಾನ್​ನಲ್ಲಿ ಸಿಲುಕಿರುವ ವರ ಪೈಕಿ 754 ಮಂದಿ ಶುಕ್ರವಾರ ಸ್ವದೇಶಕ್ಕೆ ಬಂದಿದ್ದಾರೆ. 392 ಜನರು ಸಿ-17 ಗ್ಲೋಬಲ್ ಮಾಸ್ಟರ್ ವಿಮಾನದಲ್ಲಿ ನವದೆಹಲಿಗೆ ಬಂದಿದ್ದು, ವಾಯುಪಡೆಯ ಇನ್ನೊಂದು ವಿಮಾನ 362 ಮಂದಿಯನ್ನು ಬೆಂಗಳೂರಿಗೆ ಕರೆತಂದಿದೆ. ಸುಡಾನ್​ನಿಂದ ಆಪರೇಷನ್ ಕಾವೇರಿ ಮೂಲಕ ಈವರೆಗೆ 1,360 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ.

    ಸುಡಾನ್​ನಲ್ಲಿರುವ ಭಾರತೀಯರನ್ನು ರೇವು ಪಟ್ಟಣ ಪೋರ್ಟ್ ಸುಡಾನ್​ಗೆ ಕರೆತರಲಾಗುತ್ತಿದ್ದು ಅಲ್ಲಿಂದ ಮೊದಲ ಹಂತದಲ್ಲಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ನೌಕೆ ಮತ್ತು ವಿಮಾನದ ಮೂಲಕ ಸ್ಥಳಾಂತರಿಸಿ ಅಲ್ಲಿಂದ ಭಾರತಕ್ಕೆ ಸೇನಾ ವಿಮಾನ ಮತ್ತು ವಾಣಿಜ್ಯ ವಿಮಾನಗಳಲ್ಲಿ ಕರೆತರಲಾಗುತ್ತಿದೆ. ಈ ರೀತಿಯಲ್ಲಿ ಬುಧವಾರ 360 ಮಂದಿ ಮೊದಲ ತಂಡದಲ್ಲಿ ದೆಹಲಿಗೆ ಬಂದಿದ್ದು, ಎರಡನೇ ತಂಡದಲ್ಲಿ ಗುರುವಾರ 246 ಜನರನ್ನು ಕರೆತರಲಾಗಿದೆ. ಸುಮಾರು ಎರಡು ಸಾವಿರದಷ್ಟು ಮಂದಿ ಜೆಡ್ಡಾಕ್ಕೆ ಬಂದಿದ್ದಾರೆ. ಪೋರ್ಟ್ ಸುಡಾನ್ ಮತ್ತು ಜೆಡ್ಡಾದಲ್ಲಿ ನಿಯಂತ್ರಣಾ ಕೇಂದ್ರವನ್ನು ಭಾರತ ತೆರೆದಿದೆ. ಇದರೊಟ್ಟಿಗೆ ಸುಡಾನ್ ರಾಜಧಾನಿ ಖಾರ್ಟೂಮ್ಲ್ಲಿರುವ ದೂತಾವಾಸ ಸತತ ಸಂಪರ್ಕದಲ್ಲಿ ಇದ್ದು, ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ ಜತೆ ಸಂವಹನ ಮಾಡುತ್ತಿದೆ. ಸುಡಾನ್​ನಲ್ಲಿ ಸೇನಾ ಪಡೆ ಮತ್ತು ಅರೆಸೇನಾ ಪಡೆಯ ಕಾಳಗದಿಂದ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 4,000ಕ್ಕೂ ಅಧಿಕ ಜನರಿಗೆ ಗಾಯವಾಗಿದೆ.

    ನಿಲ್ಲದ ಘರ್ಷಣೆ: ಘರ್ಷಣೆಯಲ್ಲಿ ತೊಡಗಿರುವ ಸೇನೆ ಮತ್ತು ಕ್ಷಿಪ್ರ ಬೆಂಬಲ ಪಡೆ (ಆರ್​ಎಸ್​ಪಿ)ಗಳು ಮೂರು ದಿನ ಕದನವಿರಾಮ ಘೋಷಿಸಿದ್ದವು. ಇದು ಕೊನೆಗೊಳ್ಳುತ್ತಿದ್ದಂತೆಯೇ ಮತ್ತೆ ಕಾಳಗ ಆರಂಭವಾಗಿದೆ. ಖಾರ್ಟೂಮ್ ಹೊರವಲಯದ ಕಫೌರಿ, ವಿಮಾನ ನಿಲ್ದಾಣದಲ್ಲಿ ಘರ್ಷಣೆ ಹೆಚ್ಚಾಗಿದೆ. ಸೇನೆ ಮತ್ತು ಆರ್​ಎಸ್​ಪಿಗಳ ಸಿಬ್ಬಂದಿ ಬೀದಿ ಬೀದಿಗಳಲ್ಲಿ ಗನ್ ಹಿಡಿದು ಹೊಡೆದಾಡುತ್ತಿದ್ದಾರೆ. ಈ ರಕ್ತಪಾತ ಯಾವಾಗ ಕೊನೆಯಾಗುವುದೋ ಎಂದು ರಾಜಧಾನಿ ಖಾರ್ಟೂಮ್ ನಾಗರಿಕರು ಆತಂಕಗೊಂಡಿದ್ದಾರೆ. ಜನರು ಹೊರಗೆ ಬಾರದ ಸ್ಥಿತಿ ಇದ್ದು, ಆಹಾರ, ನೀರು, ಔಷಧಗಳ ಕೊರತೆಯಿಂದ ಬಳಲುತ್ತಿದ್ದಾರೆ. ಉಭಯ ಸೇನೆಗಳ ಜನರಲ್​ಗಳ ಮಧ್ಯೆ ಸಂಧಾನ ಏರ್ಪಡಿಸಲು ಸೌದಿ ಅರೇಬಿಯಾ, ಆಫ್ರಿಕಾ, ವಿಶ್ವಸಂಸ್ಥೆ, ಅಮೆರಿಕಗಳು ಮಧ್ಯಸ್ಥಿಕೆ ಮಾಡುತ್ತಿವೆ. ಇದರ ಫಲವಾಗಿ 72 ತಾಸುಗಳ ಕದನವಿರಾಮವಷ್ಟೆ ಸಾಧ್ಯವಾಗಿದೆ.

    ಭಾರತಕ್ಕೆ ಫ್ರಾನ್ಸ್ ಧನ್ಯವಾದ

    ಸುಡಾನ್​ನ ಖಾರ್ಟೂಮ್ಲ್ಲಿ ಸಿಲುಕಿದ್ದ ಫ್ರಾನ್ಸ್​ನ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಮತ್ತು ಅವರ ಕುಟುಂಬ ಹಾಗೂ ರಾಯಭಾರ ಕಚೇರಿಯ ಕೆಲವು ಸಿಬ್ಬಂದಿಯನ್ನು ಭಾರತ ಶುಕ್ರವಾರ ಜೆಡ್ಡಾಗೆ ಕರೆತಂದಿದೆ. ನೆರವು ನೀಡಿದ ಭಾರತಕ್ಕೆ ಫ್ರಾನ್ಸ್ ಧನ್ಯವಾದ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts