

ಉಡುಪಿ: ಕರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ಆ ಪೈಕಿ ಧಾರ್ಮಿಕ ಕಾರ್ಯಕ್ರಮಗಳೂ ಸೇರಿವೆ. ಆದರೆ ಇದೀಗ ಜನರ ಧಾರ್ಮಿಕ ಭಾವನೆಗಳಿಗೆ ಅಡ್ಡಿಪಡಿಸಬೇಡಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಿ ಎಂಬುದಾಗಿ ಆಡಳಿತ ಪಕ್ಷದಿಂದಲೇ ಒತ್ತಾಯ ಕೇಳಿಬಂದಿದೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಬೇಕು, ಅದಕ್ಕೆ ಅಡ್ಡಿಪಡಿಸುವುದು ಜನಪ್ರಿಯ ಸರ್ಕಾರದ ಲಕ್ಷಣವಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಆ ಸಂಬಂಧಿತ ನಿರ್ಬಂಧದ ಆದೇಶ ಹಿಂದಕ್ಕೆ ಪಡೆಯಿರಿ ಎಂಬುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಉಡುಪಿ ಶಾಸಕ ರಘುಪತಿ ಭಟ್ ಮನವಿ ಮಾಡಿಕೊಂಡಿದ್ದಾರೆ.
ಉಡುಪಿ ಧಾರ್ಮಿಕ ಕೇಂದ್ರಗಳೇ ಹೆಚ್ಚಿರುವ ಜಿಲ್ಲೆ. ಕೋಲ, ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಜನ ಕಂಕಣಬದ್ಧರಾಗಿದ್ದಾರೆ. ಕೆಲವೆಡೆ ಈಗಾಗಲೇ ಮುಹೂರ್ತ ನಿಗದಿಯಾಗಿದ್ದು, ಎಲ್ಲ ಸಿದ್ಧತೆಗಳೂ ಆಗಿವೆ. ಹೀಗಾಗಿ ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ನಿರ್ಬಂಧ ಆದೇಶವನ್ನು ಹಿಂಪಡೆಯಿರಿ. ನಾನೊಬ್ಬ ಆಡಳಿತ ಪಕ್ಷದ ಸದಸ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂಬುದಾಗಿ ಅವರು ಹೇಳಿದ್ದಾರೆ.
ಕೋವಿಡ್ ನಿಯಮಾವಳಿಗಳನ್ನು ರೂಪಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿಕೊಡಿ, ಭಾಗವಹಿಸುವ ಭಕ್ತರ ಸಂಖ್ಯೆಯನ್ನು ನಿಗದಿಪಡಿಸಿ. ರಾಜಕೀಯ ಕಾರ್ಯಕ್ರಮಗಳು ಅನಿವಾರ್ಯವಲ್ಲದಿದ್ದರೂ ಅವುಗಳಿಗೆ ಅವಕಾಶ ಕೊಟ್ಟಿದ್ದೇವೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಿಗೆ ಧಾರ್ಮಿಕ ಕಾರ್ಯಕ್ರಮಗಳು ಅತ್ಯಗತ್ಯ. ಕರಾವಳಿಯ ಜೀವನಪದ್ಧತಿಯನ್ನು ಅರ್ಥಮಾಡಿಕೊಳ್ಳಿ. ಜನಸಂದಣಿಗೆ ನಿಯಂತ್ರಣ ಹೇರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ ಎಂದಿರುವ ಅವರು ಉಡುಪಿ ನಗರಕ್ಕೆ ನೈಟ್ ಕರ್ಪ್ಯೂ ಅಗತ್ಯವಿಲ್ಲ, ಕರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರವೂ ಅಲ್ಲ ಎಂದು ಹೇಳಿದ್ದಾರೆ.