ಮದುವೆಗಳಿಗೆ ಇನ್ಮುಂದೆ ಪಾಸ್ ಕಡ್ಡಾಯ! ಜನರಿಗೆ ಆಮಂತ್ರಣ ಪತ್ರಿಕೆ ಜತೆ ಪಾಸ್ ಅನ್ನೂ ಕೊಡ್ಲೇಬೇಕು

wedding
Published on

ಬೆಂಗಳೂರು: ಮದುವೆ ಏರ್ಪಡಿಸುವವರು ಇನ್ಮುಂದೆ ಆಮಂತ್ರಣ ಪತ್ರಿಕೆ ನೀಡಿದರಷ್ಟೆ ಸಾಲದು. ಆಯಾ ಜಿಲ್ಲಾ ಆಡಳಿತದಿಂದ ಪಾಸ್ ಪಡೆದು ಆಮಂತ್ರಿತರಿಗೆ‌ ವಿತರಿಸಬೇಕು. ಜತೆಗೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನೂ ನೀಡಬೇಕು.

ವಿಕಾಸಸೌಧದಲ್ಲಿ ಸಚಿವರಾದ‌ ಆರ್.ಅಶೋಕ್, ಬಸವರಾಜ ಬೊಮ್ಮಾಯಿ‌ ಹಾಗೂ ಡಾ.ಕೆ.ಸುಧಾಕರ್ ಜಂಟಿಯಾಗಿ ಸುದ್ದಿಗಾರರಿಗೆ‌ ಈ‌ ವಿಷಯ ತಿಳಿಸಿದರು. ಕರೊನಾ 2ನೇ ಅಲೆ ಹಾವಳಿ ಹತೋಟಿಗೆ ತರಲು ಕಠಿಣ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈಗಾಗಲೇ ಕಲ್ಯಾಣ ಮಂಟಪ ಸಭಾಂಗಣ ಕಾದಿರಿಸಿದವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಇನ್ಮುಂದೆ ಬುಕ್ ಆಗಲಿರುವ ಮದುವೆ ಸಮಾರಂಭಗಳಿಗೆ ಪೂರ್ವಾನುಮತಿ, ಮಾರ್ಗಸೂಚಿ ಪ್ರಕಾರ ನಿಗದಿಪಡಿಸಿದ ಜನರಿಗೆ ಪಾಸ್ ಪಡೆಯಲೇಬೇಕು. ಇದನ್ನು ಉಲ್ಲಂಘಿಸುವ ಕಲ್ಯಾಣ ಮಂಟಪ ಅಥವಾ ಸಭಾಂಗಣಗಳನ್ನು 6 ತಿಂಗಳು ಬಂದ್ ಮಾಡುವ ಜತೆಗೆ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಜಾತ್ರೆ ಸಂಪೂರ್ಣ ನಿಷೇಧಿಸಿದ್ದು, ಇಷ್ಟಾಗಿಯೂ ಜಾತ್ರೆಗಳು ನಡೆದರೆ ಆಯಾ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಗಳು ಕರೊನಾ ಸೋಂಕಿತರಿಗೆ ಮೀಸಲು, ರೆಮ್ ಡಿಸಿವಿರ್ ಚುಚ್ಚುಮದ್ದು, ಆಕ್ಸಿಜನ್ ಕೊರತೆಯಾಗದಂತೆ ಕ್ರಮ ವಹಿಸಲಿದ್ದು, ಅಗತ್ಯದ ಆರ್ಥಿಕ ನೆರವು ಸೋಮವಾರ ಬಿಡುಗಡೆಯಾಗಲಿದೆ ಎಂದು ಆರ್.ಅಶೋಕ್ ಹೇಳಿದರು.

ಬೆಂಗಳೂರಿಗೆ ಪ್ರತ್ಯೇಕವಾಗಿ ಸೋಮವಾರ ವಿಡಿಯೋ ಸಂವಾದ ನಡೆಯಲಿದೆ. ರಾತ್ರಿ ಕರ್ಫ್ಯೂ ವಿಸ್ತರಣೆ ಅಥವಾ ಇನ್ನಿತರ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏ.20ರಂದು ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net