

ಕೃಷ್ಣಗಿರಿ: ಗರ್ಭಿಣಿ ಮಗಳನ್ನೇ ಗುಂಡಿಕ್ಕಿ ಪಾಪಿ ತಂದೆ ಕೊಂದಿದ್ದಾನೆ. ಯುಗಾದಿ ಹಬ್ಬಕ್ಕೆಂದು ಗಂಡನ ಮನೆಯಿಂದ ತವರು ಮನೆಗೆ ಗಂಡನ ಜತೆ ಬಂದಿದ್ದ ಮಗಳು ಅಪ್ಪನ ಕೈಯಿಂದಲೇ ಕೊಲೆಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕಿನ ಮದಯ್ಯದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ.
ವೆಂಕಟಲಕ್ಷ್ಮೀ(21) ಮೃತ ದುರ್ದೈವಿ. ಮಗಳನ್ನೇ ಕೊಲೆ ಮಾಡಿದವ ಅರುಣಾಚಲಂ(50). ನಾಲ್ಕು ತಿಂಗಳ ಹಿಂದಷ್ಟೆ ಮಾಲೂರಿನ ಶ್ರೀನಿವಾಸನ್ ಎಂಬಾತನ ಜತೆ ವೆಂಕಟಲಕ್ಷ್ಮೀಯನ್ನು ಮದುವೆ ಮಾಡಲಾಗಿತ್ತು. ಮೂರು ತಿಂಗಳ ಗರ್ಭಿಣಿ ಆಗಿದ್ದಳು. ಯುಗಾದಿ ಹಬ್ಬಕ್ಕೆಂದು ತವರು ಮನೆಗೆ ಮಗಳು ಮತ್ತು ಅಳಿಯ ಇಬ್ಬರೂ ಬಂದಿದ್ದರು. ಇದನ್ನೂ ಓದಿರಿ ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್ ಉತ್ತರ ಕೊಟ್ಟ ಪ್ರಿಯಕರ
ಮಂಗಳವಾರ ಸಂಭ್ರಮದಿಂದ ಯುಗಾದಿ ಹಬ್ಬ ಆಚರಿಸಿದ್ದರು. ಮದ್ಯವ್ಯಸನಿಯಾಗಿದ್ದ ವೆಂಕಟಲಕ್ಷ್ಮೀಯ ತಂದೆ ಅರುಣಾಚಲಂ ಬುಧವಾರ ರಾತ್ರಿ ಕಂಠ ಪೂರ್ತಿ ಮದ್ಯ ಸೇವಿಸಿ ಬಂದಿದ್ದ. ಪತ್ನಿ ಮಾದೇವಿ ಜತೆ ಗಲಾಟೆ ತೆಗೆದಿದ್ದ. ಮನೆಯಲ್ಲಿದ್ದ ಬಂದೂಕಿನಿಂದ ಮಾದೇವಿ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದ. ಈ ವೇಳೆ ಅಪ್ಪನಿಂದ ಅಮ್ಮನನ್ನು ರಕ್ಷಣೆ ಮಾಡಲು ಮುಂದಾದ ವೆಂಕಟಲಕ್ಷ್ಮೀಗೆ ಗುಂಡು ತಗುಲಿ ಆಕೆ ಮೃತಪಟ್ಟಿದ್ದಾಳೆ.
ಕುಡಿದ ಅಮಲಿನಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ತಂದೆ, ಗರ್ಭಿಣಿ ಮಗಳ ಸಾವಿಗೆ ಕಾರಣವಾಗಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.