

ರವೀಂದ್ರ ಕೋಟ
ಗ್ರಾಪಂ ವ್ಯಾಪ್ತಿಯ ಮೂಡುಗಿಳಿಯಾರು ಪರಿಸರಕ್ಕೆ ಹಲವಾರು ವರ್ಷಗಳಿಂದ ವಾರಾಹಿ ನೀರು ಬೇಳೂರು ಹಾಗೂ ವಡ್ಡರ್ಸೆ ಗ್ರಾಪಂ ಮಾರ್ಗವಾಗಿ ಹರಿಯಲ್ಪಡುತ್ತಿದ್ದು, ಇದೀಗ ಕೆಲವು ಕಿಡಿಗೇಡಿಗಳಿಂದ ನೀರಿಗೆ ತಡೆಯೊಡ್ಡುವ ಕಾರ್ಯವೆಸಗುತ್ತಿದ್ದಾರೆ.
ಸಾಮಾನ್ಯವಾಗಿ ಮೂಡುಗಿಳಿಯಾರು ಪರಿಸರದಲ್ಲಿ ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕುಸಿದು ಕುಡಿಯುವ ನೀರಿಗೆ ಬರ ಎದುರಾಗುತ್ತದೆ. ಆದರೆ ಕಳೆದ ಹಲವಾರು ವರ್ಷಗಳಿಂದ ವಾರಾಹಿ ನೀರು ಕಮ್ಮಟ್ಟು ಮಾರ್ಗವಾಗಿ ಬಚ್ಚಲುತೋಡಿನ ಮೂಲಕ ಹರಿಯುತ್ತಿರುವುದರಿಂದ ಆ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಬರ ನೀಗಿದೆ.
ಈ ವರ್ಷ ಬೇಳೂರು ಗ್ರಾಪಂ ಹಾಗೂ ವಡ್ಡರ್ಸೆ ಗ್ರಾಪಂ ಮೂಲಕ ಕೋಟ ಗ್ರಾಪಂ ವ್ಯಾಪ್ತಿ ಪ್ರವೇಶಿಸುತ್ತಿದ್ದ ವಾರಾಹಿ ನೀರಿಗೆ ವಡ್ಡರ್ಸೆ ಗ್ರಾಮದ ಯಾಳಹಕ್ಲು ಭಾಗದಲ್ಲಿ ಕಿಡಿಗೇಡಿಗಳು ಮರದ ಹಲಗೆ ತೆಗೆದ ಹಿನ್ನೆಲೆಯಲ್ಲಿ ಕೋಟ ಗ್ರಾಪಂಗೆ ಹರಿಯುತ್ತಿದ್ದ ನೀರಿನ ದಿಕ್ಕು ವಡ್ಡರ್ಸೆ ಗ್ರಾಮದ ಪಾಲಾಗುತ್ತಿದೆ. ಈ ಎಲ್ಲ ಭಾಗದಲ್ಲಿ ಕುಡಿಯುವ ನೀರಿನ ಬಾವಿಯ ನೀರಿನಮಟ್ಟ ಬಾರಿ ಪ್ರಮಾಣದಲ್ಲಿ ಕುಸಿಯುತ್ತಿದ್ದು, ನೀರಿಗಾಗಿ ಹಾಹಾಕಾರ ಎದುರಾಗಿದೆ.
ಕಳೆದ ವರ್ಷ ಇದೇ ಸ್ಥಿತಿ ನಿರ್ಮಾಣಗೊಂಡಾಗ ಆಗಿನ ಪಂಚಾಯಿತಿ ಅಧ್ಯಕ್ಷರು ಹಲಗೆ ಜೋಡಿಸಿ ಮೂಡುಗಿಳಿಯಾರು ಭಾಗಕ್ಕೆ ತಲುಪಬೇಕಾದ ವಾರಾಹಿ ನೀರನ್ನು ಒದಗಿಸಿದ್ದರು. ಆದರೆ ಈ ಬಾರಿ ಯಾಳಹಕ್ಲು ಡ್ಯಾಂಗೆ ಅಳವಡಿಸಿದ ಹಲಗೆಯನ್ನು ಪುನಃ ಕಿಡಿಗೇಡಿಗಳು ತೆಗೆದ ಪರಿಣಾಮ ಈ ಎಲ್ಲ ಭಾಗಗಳಿಗೆ ನೀರು ಹರಿಯದೆ ಕುಡಿಯುವ ನೀರಿಗೂ ಸಂಚಕಾರ ಬಂದೊದಗಿದೆ.
ಮೂಡುಗಿಳಿಯಾರು ಭಾಗಕ್ಕೆ ವಾರಾಹಿ ನೀರು ಪ್ರವೇಶಿಸಬೇಕಾದರೆ ವಡ್ಡರ್ಸೆ ಗ್ರಾಮದ ಯಾಳಹಕ್ಲು ಭಾಗದ ಡ್ಯಾಂಗೆ ಹೆಚ್ಚುವರಿ ಮರದ ಹಲಗೆ ಜೋಡಿಸಿದರೆ ಈ ಭಾಗಕ್ಕೆ ಹೇರಳವಾಗಿ ನೀರು ಹರಿಯುತ್ತದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲವಾಗಿದೆ.
ಯಾಳಹಕ್ಲು ಭಾಗದಲ್ಲಿ ಆವೆ ಮಣ್ಣು ಹಾಗೂ ಅಕ್ರಮ ಮರಳುಗಾರಿಗೆ ನಡೆಸುವರು ಹಲಗೆ ತೆಗೆಯುತ್ತಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮೂಡುಗಿಳಿಯಾರು ಜನತೆ ಆಗ್ರಹಿಸಿದ್ದಾರೆ.
ಮೂಡುಗಿಳಿಯಾರು ಸೇರಿದಂತೆ ಈ ಪರಿಸರದ ವಿವಿಧ ಭಾಗಗಳಿಗೆ ಹಲವಾರು ವರ್ಷಗಳಿಂದ ವಾರಾಹಿ ನೀರು ಹರಿಯುತ್ತಿದ್ದು, ಇದೀಗ ಕೆಲವರ್ಷಗಳಿಂದ ನೀರಿಗೆ ಅಳವಡಿಸಲಾದ ಹಲಗೆಯನ್ನು ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಯಾಳಹಕ್ಲು ಭಾಗದಲ್ಲಿ ಕಿಡಿಗೇಡಿಗಳು ತೆಗೆದು ನೀರು ಬೇರೆಡೆ ಹರಿಯುವಂತೆ ಮಾಡಿದ್ದಾರೆ. ಇದರಿಂದ ಕೋಟ ಗ್ರಾಪಂ ವ್ಯಾಪ್ತಿಯ ಗಿಳಿಯಾರು ಭಾಗದಲ್ಲಿ ನೀರಿನ ಕೊರತೆ ಎದುರಾಗಿದೆ. ಇದೇ ರೀತಿ ಮುಂದುವೆರೆದರೆ ನೀರಿಗೆ ಅಭಾವ ಬಂದೊದಗುತ್ತದೆ. ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಹಲಗೆ ತೆಗೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.- ಸುರೇಶ್ ಗಿಳಿಯಾರ್, ಸಾಮಾಜಿಕ ಕಾರ್ಯಕರ್ತ ಕೆಲವರ್ಷಗಳಿಂದ ಮರದ ಹಲಗೆ ತೆಗೆಯುವ ಕೆಲಸ ಕಿಡಿಗೆಡಿಗಳಿಂದ ನಡೆಯುತ್ತಿದೆ. ಕುಡಿಯುವ ನೀರಿಗೆ ಅಭಾವ ಇರುವ ಬಿರುಬೇಸಿಗೆಯಲ್ಲಿ ಈ ರೀತಿಯ ಕೃತ್ಯ ಸಲ್ಲದು. ಇದರ ಬಗ್ಗೆ ಸೂಕ್ತ ಕ್ರಮ ಕೈಕೊಳ್ಳುತ್ತೇವೆ.- ಶಾಂತಾರಾಮ್, ಎಕ್ಸಿಕ್ಯೂಟಿವ್ ಇಂಜಿನಿಯರ್,ಸಣ್ಣನೀರಾವರಿ ಇಲಾಖೆ ಉಡುಪಿ