

ಧನಂಜಯ ಗುರುಪುರ
ನದಿ ಕಿನಾರೆಗೆ ಹತ್ತಿರದ ಗುರುಪುರ, ಮಳಲಿ, ಮೂಲರಪಟ್ಣ, ಅದ್ಯಪಾಡಿ, ಮರವೂರು ಮತ್ತಿತರ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಗೆ ಕಾರಣವಾಗಿರುವ ಫಲ್ಗುಣಿ ನದಿಯ ಕೆಲವೆಡೆ ಪ್ರಸಕ್ತ ಪ್ರಖರ ಬಿಸಿಲ ಝಳಕ್ಕೆ ನೀರಿನ ಮಟ್ಟ ಕುಸಿಯಲಾರಂಭಿಸಿದ್ದು, ಇಲ್ಲಿನ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಫಲ್ಗುಣಿ ನದಿ ತೀರದಲ್ಲಿ ಎಕರೆಗಟ್ಟಲೆ ಪ್ರದೇಶದಲ್ಲಿ ಕಂಗೊಳಿಸುತ್ತಿರುವ ಕಂಗು ಮತ್ತು ತೆಂಗಿನ ತೋಟಗಳಿಗೆ ನದಿಯ ನೀರೇ ಆಶ್ರಯವಾಗಿದೆ. ಕೆಲವು ದಿನಗಳಿಂದ ತಾಪಮಾನ ಹೆಚ್ಚಳದಿಂದ ನದಿಯಲ್ಲಿ ನೀರು ನಿರಂತರ ಕುಸಿಯಲಾರಂಭಿಸಿದೆ. ಇದೇ ರೀತಿ ನದಿ ನೀರು ಆವಿಯಾದಲ್ಲಿ ಪಂಪ್‌ಗಳ ಮೂಲಕ ನೀರೆತ್ತುವುದು ಕಷ್ಟವಾಗಬಹುದು. ಹೀಗಾದರೆ ತೋಟಗಳಿಗೆ ನೀರಿಲ್ಲದಂತಾಗಬಹುದು. ನದಿಗೆ ಹತ್ತಿರದ ಪ್ರದೇಶಗಳ ಬಾವಿಗಳೂ ಬರಡಾಗಬಹುದು. ವರ್ಷಗಳ ಹಿಂದೆ ಮೂಡುಶೆಡ್ಡೆಯಲ್ಲಿ ಉಪ್ಪು ನೀರಿನ ತಡೆಗೋಡೆ ಮತ್ತು ಮರವೂರಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ನದಿ ಪಾತ್ರದ ಪ್ರದೇಶಗಳಲ್ಲಿ ಅಂತರ್ಜಲ ಕುಸಿಯುವುದು ತಪ್ಪಿದೆ. ಹಿಂದೆ ಫೆಬ್ರವರಿ ತಿಂಗಳಲ್ಲೇ ಈ ಭಾಗದಲ್ಲಿ ಫಲ್ಗುಣಿ ನದಿ ಸಂಪೂರ್ಣ ಬರಡಾಗಿ ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗುತ್ತಿತ್ತು.
ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿಯ(169) ಗುರುಪುರದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪ್ರದೇಶದಲ್ಲಿ ನದಿಗೆ ಬಂಡು ನಿರ್ಮಿಸಲಾಗಿದೆ. ಇದರಿಂದ ನಿರ್ಮಾಣ ಹಂತದ ಹೊಸ ಸೇತುವೆಯ ಎರಡೂ ಪಾರ್ಶ್ವದಲ್ಲಿ ನೀರಿದ್ದರೂ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ.
ಮರವೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನಿಂದ ಬಹುಗ್ರಾಮ ಕುಡಿಯುವ ನೀರು ಲಭ್ಯವಿದ್ದರೆ, ಗುರುಪುರದಲ್ಲಿ ನಿರ್ಮಿಸಲಾಗಿರುವ ಜ್ಯಾಕ್‌ವೆಲ್‌ನಿಂದ ಗಂಜಿಮಠ ಕೈಗಾರಿಕಾ ಪ್ರದೇಶದ ಸಹಿತ ಕೆಲವು ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಸರಬರಾಗುತ್ತಿದೆ. ಇನ್ನು ಕೆಲವೇ ಸಮಯದೊಳಗೆ ಫಲ್ಗುಣಿಯಿಂದಲೇ ಜಲಜೀವನ ಮಿಷನ್‌ನ ನೀರು ಮನೆಮನೆಗಳಿಗೆ ಪೂರೈಕೆಯಾಗಲಿದೆ. ಕುಡಿಯುವ ನೀರು ಸರಬರಾಜಿನ ಈ ಎರಡೂ ಯೋಜನೆಗಳು ಆಶಾದಾಯಕವಾಗಿದ್ದರೂ, ಉರಿ ಬಿಸಿಲಿನಿಂದ ನದಿ ನೀರು ತಳಹಿಡಿದಲ್ಲಿ ನೀರಿನ ಸಮಸ್ಯೆ ತಪ್ಪಿದ್ದಲ್ಲ. ಕಳೆದ ವರ್ಷ ಈ ಹೊತ್ತಿಗೆ ಗುರುಪುರ, ಬೈಲುಪೇಟೆ ಮೊದಲಾದ ಕೆಲವೆಡೆ ನದಿಯಲ್ಲಿ ಮರಳು ಕಾಣುವಷ್ಟು ನೀರು ಬರಿದಾಗಿತ್ತು. ಅದೃಷ್ಟವಶಾತ್ ಈ ವರ್ಷ ಅಂಥ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ಆದರೆ ಪ್ರಸಕ್ತ ಬಿಸಿಲು ಇನ್ನೂ 20 ದಿನ ಮುಂದುವರಿದರೆ ಖಂಡಿತವಾಗಿಯೂ ಹತ್ತಿರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ.
ಇದುವರೆಗೆ ಬೇಸಿಗೆಯಲ್ಲಿ ಗುರುಪುರದಲ್ಲಿ ಹೇಳಿಕೊಳ್ಳುವಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ ಪ್ರಕೃತಿ ಬಗ್ಗೆ ಯಾರಿಂದಲೂ ಏನನ್ನೂ ಹೇಳಲು ಸಾಧ್ಯವಿಲ್ಲ. ಗುರುಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಕರ್ ನೀರು ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಈಗಿಂದೀಗಲೇ ಎಲ್ಲರೂ ಹಿತಮಿತ ನೀರಿನ ಬಳಕೆಗೆ ಒತ್ತು ನೀಡುವುದು ಒಳಿತು. -ಪಂಕಜಾ ಶೆಟ್ಟಿಗುರುಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ https://www.vijayavani.net/thumbe-dam-water-level-down https://www.vijayavani.net/j-m-lobo-prabhu