More

    ಕೃಷಿಗಿಲ್ಲ ನೇತ್ರಾವತಿ ನೀರು

    -ಸಂದೀಪ್ ಸಾಲ್ಯಾನ್ ಬಂಟ್ವಾಳ

    ನೇತ್ರಾವತಿ ನದಿಯಿಂದ ಕೃಷಿಗೆ ನೀರು ಬಳಸದಂತೆ ದ.ಕ.ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಆಕ್ರೋಶಗೊಂಡಿರುವ ನದಿ ತೀರದ ರೈತರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

    ಪ್ರತಿ ಬಾರಿಯೂ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಅಭಾವ ಉಂಟಾದಾಗ ನೇತ್ರಾವತಿ ನದಿ ನೀರನ್ನೇ ನಂಬಿ ಕೃಷಿ ಮಾಡುವ ರೈತರಿಗೆ ಬರೆ ಎಳೆಯಲಾಗುತ್ತಿದೆ. ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದಿರಲು ರೈತರು ನಿರ್ಧರಿಸಿದ್ದಾರೆ!.

    ಜಿಲ್ಲೆಯ ಜೀವನದಿ ನೇತ್ರಾವತಿ ಮಂಗಳೂರು ಸಹಿತ ಸುತ್ತಮುತ್ತಲಿನ ಗ್ರಾಮಗಳಿಗೆ ನಿತ್ಯ ಕುಡಿಯುವ ನೀರು ಒದಗಿಸುವ ಪುಣ್ಯಧಾತೆ. ಈ ನದಿಯಿಂದಲೇ ಮನುಷ್ಯ ಸಹಿತ ಅದೆಷ್ಟೋ ಜೀವಸಂಕುಲಗಳು ಬದುಕುತ್ತಿವೆ, ಜತೆಗೆ ನೇತ್ರಾವತಿ ನದಿ ಹರಿದು ಬರುವ ಇಕ್ಕೆಲ ಪ್ರದೇಶಗಳು, ಕೃಷಿ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ.

    ಆದರೆ ಇತ್ತೀಚಿನ ಕೆಲ ವರ್ಷಗಳಿಂದ ನೇತ್ರಾವತಿ ನದಿಯಲ್ಲಿ ಮಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆ ಉಂಟಾದಾಗ ಜಿಲ್ಲಾಡಳಿತಕ್ಕೆ ಕಾಣುವುದೇ ನದಿ ತೀರದ ರೈತರು. ಕುಡಿಯುವ ನೀರಿಗೆ ಆದ್ಯತೆ ನೀಡುವ ಉದ್ದೇಶದಿಂದ ನದಿ ತೀರದ ರೈತರ ಪಂಪ್‌ಸೆಟ್‌ನ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿ ಕೃಷಿಗೆ ನೀರು ಪೂರೈಕೆಯಾಗದಂತೆ ನೋಡಿಕೊಳ್ಳುವುದು. ರೈತ ಬೆಳೆದ ಕೃಷಿಗೆ ಪರ್ಯಾಯ ನೀರಿನ ವ್ಯವಸ್ಥೆಯನ್ನು ಕಲ್ಪಿಸದೆ ನದಿ ನೀರು ಬಳಕೆಗೆ ನಿಷೇಧ ವಿಧಿಸಿದರೆ ಎರಡು ತಿಂಗಳಲ್ಲಿ ನೀರಿಲ್ಲದೆ ಅಡಕೆ, ತೆಂಗು, ಬಾಳೆ ಸರ್ವ ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಾರೆ. ತರಕಾರಿ ಮತ್ತಿತರ ಬೆಳೆಗಳು ನೀರಿಲ್ಲದೆ ಸುಟ್ಟು ಕರಕಲಾಗುತ್ತದೆ. ಈ ಜ್ವಲಂತ ಸಮಸ್ಯೆಗೆ ಯಾಕೆ ಜಿಲ್ಲಾಡಳಿತ ಸ್ಪಂದಿಸುವುದಿಲ್ಲ ಎನ್ನುವ ರೈತರ ಪ್ರಶ್ನೆಗೆ ಉತ್ತರಿಸುವವರಿಲ್ಲದಂತಾಗಿದೆ.

    ಡ್ಯಾಂ ಹೆಚ್ಚಾದರೂ ನೀರಿನ ಅಭಾವ

    ನೇತ್ರಾವತಿ ನದಿಗೆ ನಾಲ್ಕು ಕಿಂಡಿ ಅಣೆಕಟ್ಟು ನಿರ್ಮಾಣಗೊಂಡರೂ, ತುಂಬೆ ಡ್ಯಾಂನಲ್ಲಿ ಮೊದಲಿಗಿಂತ ನೀರಿನ ಸಂಗ್ರಹಣೆ ಹೆಚ್ಚಾದರೂ ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಮಂಗಳೂರಿನಲ್ಲಿರುವ ಬೃಹತ್ ಕೈಗಾರಿಕೆೆ, ಕಟ್ಟಡ ಕಾಮಗಾರಿಗೆ, ಜನರ ಬಳಕೆಗೆ ಯಥೇಚ್ಛವಾಗಿ ನೀರು ಬಂಟ್ವಾಳದಿಂದ ಪೂರೈಕೆಯಾಗುತ್ತಿದೆ. ನದಿಯಲ್ಲಿ ನೀರು ಸಮೃದ್ಧವಾಗಿರುವಾಗ ಅದನ್ನು ಸಂರಕ್ಷಿಸಿಡಲು ಯಾವುದೇ ಕ್ರಮಕೈಗೊಳ್ಳದೇ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾದಾಗ ರೈತರ ಮೇಲೆ ಬರೆ ಎಳೆಯುವುದು ಸರಿಯಲ್ಲ ಎಂದು ನದಿ ನೀರು ಬಳಕೆದಾರರು ತಿಳಿಸಿದ್ದಾರೆ.

    ತಹಸೀಲ್ದಾರರಿಗೆ ಮನವಿ

    ಕೃಷಿಗಾಗಿ ನೇತ್ರಾವತಿ ನದಿ ನೀರು ಬಳಸದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದು ರೈತರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಜಿಲ್ಲಾಧಿಕಾರಿ ಅವರ ರೈತ ವಿರೋಧಿ ಆದೇಶ ಖಂಡಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಇರಲು ರೈತರು ತೀರ್ಮಾನಿಸಿದ್ದಾರೆ. ಚುನಾವಣಾ ಬಹಿಷ್ಕಾರದ ಲಿಖಿತ ಮನವಿಯನ್ನು ಗುರುವಾರ ತಹಸೀಲ್ದಾರ್ ಅರ್ಚನಾ ಭಟ್ ಅವರಿಗೆ ರಾಜ್ಯ ರೈತ ಸಂಘ ಹಸಿರು ಸೇನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಲ್ಲಿಸಿ ರೈತರಿಗಾಗುತ್ತಿರುವ ತೊಂದರೆಯ ಬಗ್ಗೆ ಮನವರಿಕೆ ಮಾಡಲಾಯಿತು.

    Nethravathi Niyoga
    ರೈತ ಸಂಘದ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ನದಿ ತೀರದ ರೈತರು ತಹಸೀಲ್ದಾರ್ ಅರ್ಚನಾ ಭಟ್ ಅವರಿಗೆ ಚುನಾವಣಾ ಬಹಿಷ್ಕಾರದ ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘ ಹಸಿರು ಸೇನೆ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ನಿಯೋಗದಲ್ಲಿ ಸಜೀಪ ಮುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ರೈತ ಸಂಘದ ಕಾರ್ಯದರ್ಶಿ ಎನ್.ಕೆ.ಇದಿನಬ್ಬ, ಸುರೇಶ್ ಗಟ್ಟಿ, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.

    ನಿಯೋಗದಲ್ಲಿ ಸಜೀಪ ಮುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ರೈತ ಸಂಘದ ಕಾರ್ಯದರ್ಶಿ ಎನ್.ಕೆ.ಇದಿನಬ್ಬ, ಸುರೇಶ್ ಗಟ್ಟಿ, ಅಬ್ದುಲ್ ಖಾದರ್, ಅಬ್ದುಲ್ ಜಬ್ಬಾರ್, ಸಂದೇಶ ಗಟ್ಟಿ, ಇಮ್ರಾನ್, ಅಬ್ದುಲ್ ಲತೀಫ್, ಚಂದ್ರಹಾಸ, ಅಬ್ದುಲ್ ರಶೀದ್, ಅಬ್ದುಲ್ ರಹಮಾನ್, ಹಸೇನಾರ್ ಉಪಸ್ಥಿತರಿದ್ದರು.

    1984ರಿಂದ ನೇತ್ರಾವತಿ ನದಿಯಲ್ಲಿ ನೀರಿನ ಕೊರತೆ ಎದುರಾದಾಗ ರೈತರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ನದಿ ನೀರು ಬಳಕೆಗೆ ನಿಷೇಧ ವಿಧಿಸಿದರೆ ಎರಡು ತಿಂಗಳಲ್ಲಿ ನೀರಿಲ್ಲದೆ ಅಡಕೆ, ತೆಂಗು ಸರ್ವ ನಾಶವಾಗಿ ರೈತರು ಸಂಕಷ್ಟಕ್ಕೆ ಈಡಾಗುತ್ತಾರೆ. ಅನ್ನದಾತನ 30 ವರ್ಷಗಳ ಜ್ವಲಂತ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರು ಪರಿಹಾರ ಸಿಕ್ಕಿಲ್ಲ.
    -ಎಂ.ಸುಬ್ರಹ್ಮಣ್ಯ ಭಟ್
    ಅಧ್ಯಕ್ಷರು, ರೈತ ಸಂಘ ಹಸಿರು ಸೇನೆ ಬಂಟ್ವಾಳ ತಾಲೂಕು ಸಮಿತಿ

    ಅಕ್ಟೋಬರ್, ನವೆಂಬರ್‌ನಲ್ಲಿ ನೀರು ಸಂರಕ್ಷಿಸುವ ಬಗ್ಗೆ ಗಮನ ಹರಿಸದೆ ದುರಸ್ತಿಯ ನೆಪದಲ್ಲಿ ನೀರನ್ನು ಡ್ಯಾಂನಿಂದ ಹೊರ ಚೆಲ್ಲಿ, ಮಾರ್ಚ್, ಏಪ್ರಿಲ್ ಮೇನಲ್ಲಿ ನೀರು ಕಾಯ್ದಿಟ್ಟುಕೊಳ್ಳುವ ಉದ್ದೇಶದಿಂದ ರೈತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ರೈತರಿಗೆ ಮಾಹಿತಿ ನೀಡದೆ ವಿದ್ಯುತ್ ಸಂಪರ್ಕದ ಫೀಸು ಕೊಂಡೊಯ್ಯುವುದು ರೈತರಿಗೆ ಮಾಡುವ ಅನ್ಯಾಯ.
    -ಯೂಸುಫ್ ಕರಂದಾಡಿ
    ಮಾಜಿ ಅಧ್ಯಕ್ಷರು, ಸಜೀಪಮುನ್ನೂರು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts