

ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೆ ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದ ಆರೋಪಿಯನ್ನು ಗೋವಿಂದರಾಜನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗೋಂವಿಂದರಾಜನಗರ ನಿವಾಸಿ ಮಾರಿಮುತ್ತು(೧೯) ಬಂಧಿತ ಆರೋಪಿ.
ಗೋವಿಂದರಾಜನಗದಲ್ಲಿ ಶುಕ್ರವಾರ ಮಧ್ಯಾಹ್ನ ನರೇಶ್ ಎಂಬಾತನ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಆರೋಪಿ ಮಾರಿಮುತ್ತು ಮತ್ತು ಸಹಚರರು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಮಾರಿಮುತ್ತುನನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಭಾವಿ ಮುಖ್ಯರಸ್ತೆಯಲ್ಲಿರುವ ಬಾರ್‌ನಲ್ಲಿ ಕುಡಿಯಲು ಬಂದಿದ್ದ ನರೇಶ್ ಹಾಗೂ ಸ್ನೇಹಿತ ಮಾರಿಮುತ್ತು ನಡುವೆ ಗಲಾಟೆಯಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದ್ದಾಗ ಪುಟ್‌ಪಾತ್ ಮೇಲಿದ್ದ ಟೈಲ್ಸ್ ಕಲ್ಲನ್ನು ತೆಗೆದುಕೊಂಡು ನರೇಶ್ ತಲೆಗೆ ಹೊಡೆದಿದ್ದ ಮಾರಿಮುತ್ತು ಪರಾರಿಯಾಗಿದ್ದ. ಪೆಟ್ಟು ಹೆಚ್ಚಾಗಿದ್ದರಿಂದ ರಕ್ತಸ್ರಾವ ಉಂಟಾಗಿ ಕುಸಿದುಬಿದ್ದು ನರೇಶ್ ಮೃತಪಟ್ಟಿದ್ದಾನೆ.
ಕೊಲೆಗೆ ಕಾರಣವೇನು?
ಆರೋಪಿ ಮಾರಿಮುತ್ತು ಹೆಚ್ಚು ಯಾರೊಂದಿಗೂ ಬೆರೆಯದ ವಿಚಿತ್ರ ಮನಸ್ಥಿತಿಯವನಾಗಿದ್ದ. ಹನ್ನೊಂದು ವರ್ಷದವನಿದ್ದಾಗಲೇ ವಿಜಯನಗರ ವ್ಯಾಪ್ತಿಯಲ್ಲಿ ಒಂದು ಹತ್ಯೆ ಮಾಡಿ ಸೆರೆವಾಸ ಅನುಭವಿಸಿ ಹೊರಬಂದಿದ್ದ. ಶುಕ್ರವಾರ ಮಧ್ಯಾಹ್ನ ಮಾರಿಮುತ್ತು ಜತೆ ಬಾರಿಗೆ ಹೋಗಿದ್ದ ನರೇಶ್ ನಿನ್ನ ಭವಿಷ್ಯ ಹೇಳ್ತೀನಿ ಎಂದು ಆತನ ಬಳಿ ’ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ’ ಎಂದು ಆತನನ್ನ ರೇಗಿಸಲಾರಂಭಿಸಿದ್ದ.
ಇದರಿಂದ ಸಿಟ್ಟಿಗೆದ್ದ ಮಾರಿಮುತ್ತು ಬಾರ್ ಒಳಗಡೆಯಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದರು. ಜಗಳವಾಡುತ್ತಲೇ ಇಬ್ಬರೂ ಹೊರಬಂದಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ್ ತಲೆಗೆ ಹೊಡೆದಿದ್ದ ಮಾರಿಮುತ್ತು ಪರಾರಿಯಾಗಿದ್ದ. ಕುಸಿದುಬಿದ್ದು ನರೇಶ್ ಸಾವನ್ನಪ್ಪಿದ್ದ ಮೃತನ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಕೊಲೆ ಪ್ರಕರಣ ಸಂಬಂಧ ಆರೋಪಿ ಮಾರಿಮುತ್ತು ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದ್ದು, ತನಿಖೆ ಮುಂದುವರಿದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.