

ಮಹಾರಾಷ್ಟ್ರ: ಆರ್ಆರ್ಆರ್ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದೇ ನನ್ನಿಂದ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಹೇಳಿಕೊಂಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ತಮ್ಮ ನಟನೆಯ ಭೋಲಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಿಝಿಯಾಗಿರುವ ಅಜಯ್ ದೇವಗನ್ ಇತ್ತೀಚೆಗೆ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಅಜಯ್ ಆರ್ಆರ್ಆರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಕಪಿಲ್ ಶರ್ಮಾ ಮಾತನಾಡುತ್ತಾ, ಆರ್ಆರ್ಆರ್ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿರುವುದಕ್ಕೆ ಅಜಯ್ ದೇವಗನ್ಗೆ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಾ, ಆಸ್ಕರ್ ಲಭಿಸಿರುವುದು ನನ್ನಿಂದಾಗಿ ಎಂದು ಅಜಯ್ ಹೇಳಿದ್ದಾರೆ. ಮುಂದುವರೆದು ಒಂದು ವೇಳೆ ನಾಟು ನಾಟು ನಾಟು ಹಾಡಿನಲ್ಲಿ ನಾನು ಡ್ಯಾನ್ಸ್ ಮಾಡಿದ್ದರೆ ಹೇಗಿರುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ. ನಾನು ಡಾನ್ಸ್ ಮಾಡಿಲ್ಲದ ಕಾರಣಕ್ಕೆ ಆಸ್ಕರ್ ಗೆದ್ದಿದೆ ಎಂದು ಅಜಯ್ ದೇವಗನ್ ಹೇಳುತ್ತಿದ್ದಂತೆ ಎಲ್ಲರೂ ನಗೆಗಡಲಲ್ಲಿ ತೇಲಾಡಿದ್ದಾರೆ.
ಮೊದಲ ಬಾರಿಗೆ ಅಜಯ್ ದೇವಗನ್ ಆರ್ಆರ್ಆರ್ ಸಿನಿಮಾ ಮೂಲಕ ದಕ್ಷಿಣ ಭಾರತದ ಸಿನಿಮಾದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಪೊಲೀಸ್ ಕಾನ್ಸ್‌ಟೇಬಲ್ ಆಯ್ಕೆ
95ನೇ ಆಸ್ಕರ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಭಾರತಕ್ಕೆ ಎರಡು ಪ್ರಶಸ್ತಿಗಳು ಸಿಕ್ಕಿವೆ. ‘RRR’ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಎಂದನಿಸಿಕೊಂಡರೆ, ‘ದಿ ಎಲಿಫೆಂಟ್ ವಿಸ್ಪರರ್ಸ್’ ಎಂಬ ಸಾಕ್ಷ್ಯಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಮಾರಂಭದಲ್ಲಿ ‘RRR’ ಚಿತ್ರತಂಡದವರು ಹಾಜರಿದ್ದು, ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್ ಅವರನ್ನು ಪ್ರೋತ್ಸಾಹಿಸಿದ್ದಾರೆ.