ಬಿಬಿಎಂಪಿಯಲ್ಲಿ 150 ಇಂಜಿನಿಯರ್‌ಗಳ ನೇಮಕಕ್ಕೆ ಅನುಮತಿ

bbmp pic
Published on

ಬೆಂಗಳೂರು: ಬಿಬಿಎಂಪಿಯಲ್ಲಿ ಹೊಸದಾಗಿ 150 ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ.

ಪಾಲಿಕೆಯ ಇಂಜಿನಿಯರ್ ವಿಭಾಗದ ಅಧಿಕಾರಿಗಳ ಕಾರ್ಯ ಒತ್ತಡ ಕಡಿಮೆಗೊಳಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಮೂಲಕ ನೇರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆ.21 ರಂದು ಆರ್ಥಿಕ ಇಲಾಖೆ ಸಹ ಇದಕ್ಕೆ ನೇಮಕಾತಿಗೆ ಸಹಮತ ನೀಡಿದೆ. ಬೆಂಗಳೂರು ನಗರ ಉಸ್ತುವಾರಿ ಸಚಿವ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಇದಕ್ಕೆ ಅನುಮೋದಿಸಿದ್ದಾರೆ.

ಹೀಗಾಗಿ, ಶೀಘ್ರದಲ್ಲೆ ಪಾಲಿಕೆಯಲ್ಲಿ ಖಾಲಿಯಿರುವ 100 ಸಹಾಯಕ ಅಭಿಯಂತರರು (ಸಿವಿಲ್) ಮತ್ತು 50 ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. 2009-10ರಲ್ಲಿ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಕಿಯೋನಿಕ್ಸ್) ಮೂಲಕ ಗುತ್ತಿಗೆ ಆಧಾರದಲ್ಲಿ ಸಿವಿಲ್ ಇಂಜಿನಿಯರ್‌ಗಳ ನೇಮಕಾತಿ ನಡೆದಿತ್ತು. ಅಂದಿನಿಂದ ಇಂದಿನವರೆಗೆ ನೇಮಕಾತಿ ಪ್ರಕ್ರಿಯೆಯು ನಡೆದಿರಲಿಲ್ಲ.

ಮೊದಲ ಹಂತದಲ್ಲಿ ಪಾಲಿಕೆಯಲ್ಲಿ ಖಾಲಿ ಉಳಿದಿರುವ 100 ಸಹಾಯಕ ಅಭಿಯಂತರರು ಮತ್ತು 50 ಕಿರಿಯ ಅಭಿಯಂತರರನ್ನು ಕೆಪಿಎಸ್‌ಸಿ ಮೂಲಕ ನೇಮಕಾತಿ ಮಾಡಿಕೊಳ್ಳಲು ನಗರಾಭಿವೃದ್ದಿ ಇಲಾಖೆಯ ಅಧೀನ ಕಾರ್ಯದರ್ಶಿ ಎನ್.ಕೆ.ಲಕ್ಷ್ಮೀಸಾಗರ್ ಸುತ್ತೋಲೆ ಹೊರಡಿಸಿದ್ದಾರೆ. ಈ ಹುದ್ದೆಗಳು ಭರ್ತಿಯಾದ ನಂತರ ಪಾಲಿಕೆಯಲ್ಲಿ ನಿಯೋಜನೆ ಮತ್ತು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಮತ್ತು ಕಿರಿಯ ಇಂಜಿನಿಯರ್‌ಗಳನ್ನು ಪ್ರಮಾಣಕ್ಕನುಗುಣವಾಗಿ ಕಡ್ಡಾಯವಾಗಿ ಕಡಿಮೆ ಮಾಡಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net