

ತುಮಕೂರು: ಪಾವಗಡದಲ್ಲಿ ಇಂದು ಸಂಭವಿಸಿದ ಖಾಸಗಿ ಬಸ್ ಅಪಘಾತದಲ್ಲಿ ಐವರು ಸಾವಿಗೀಡಾಗಿದ್ದಾರೆ. ಮತ್ತೊಂದೆಡೆ ಒಂದಿಡೀ ಬಸ್ ಜನರು ಗಾಯಗೊಂಡಿದ್ದಾರೆ ಎಂಬಷ್ಟು ಮಂದಿ ಗಾಯಾಳುಗಳಾಗಿದ್ದಾರೆ. ಗಾಯಾಳುಗಳ ಕುರಿತ ನಿಖರ ಮಾಹಿತಿಯನ್ನು ಇದೀಗ ಸಾರಿಗೆ ಸಚಿವರೇ ಅಧಿಕೃತವಾಗಿ ತಿಳಿಸಿದ್ದಾರೆ.
ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿದ್ದು, ಐವರು ಸಾವಿಗೀಡಾಗಿದ್ದಾರೆ. ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಈ ಬಸ್ ಅಪಘಾತದಲ್ಲಿ ಆರಂಭದಲ್ಲಿ 25ಕ್ಕೂ ಮಂದಿ ಗಾಯಗೊಂಡಿದ್ದರು ಎನ್ನಲಾಗಿತ್ತು. ಆದರೆ ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ.
ಘಟನಾ ಸ್ಥಳಕ್ಕೆ ಸಾರಿಗೆ ಸಚಿವ ಶ್ರೀರಾಮುಲು ತೆರಳಿ, ಸೂಕ್ತ ಕ್ರಮಕೈಗೊಂಡಿದ್ದಾರೆ. ಮುಖ್ಯಮಂತ್ರಿಯವರೇ ನನ್ನನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದ್ದು, ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ರೀತಿ ಆಗಿದೆ. ಇಂಥ ದುರಂತ ಇನ್ನೆಲ್ಲೂ ಆಗಬಾರದು. ತುಮಕೂರು-ಪಾವಗಡಗಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಆಗಬೇಕು. ಆ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟವರ ಬಳಿ ಮಾತನಾಡಿ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಇನ್ನು ಅಪಘಾತದಲ್ಲಿ ಗಾಯಗೊಂಡವರ ಕುರಿತು ಮಾಹಿತಿ ನೀಡಿದ ಅವರು, ಈ ಅಪಘಾತದಲ್ಲಿ ಐವರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 17 ಮಂದಿ ತುಮಕೂರು ಆಸ್ಪತ್ರೆಯಲ್ಲಿ, ಮತ್ತೊಂದು ಆಸ್ಪತ್ರೆಯಲ್ಲಿ 47 ಮಂದಿ, ಇನ್ನು ಕೆಲವರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.