

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಇಲ್ಲಿನ ಸರ್ಕಾರಿ ಆಸ್ಪತ್ರೆ ಕಟ್ಟಡ ನೋಡಲು ಸುಂದರ, ಆಧುನಿಕ ವ್ಯವಸ್ಥೆಗಳು ಕೂಡ ಇವೆ. ಆದರೆ ಕೊರತೆ ಎಂದರೆ ಹೆರಿಗೆ ತಜ್ಞರೇ ಇಲ್ಲದಿರುವುದು. ಇದರಿಂದ ಗರ್ಭಿಣಿಯರು ಖಾಸಗಿ ಆಸ್ಪತ್ರೆಯತ್ತ ದೌಡಾಯಿಸುವ ಪರಿಸ್ಥಿತಿ ಕಾರ್ಕಳದಲ್ಲಿ ನಿರ್ಮಾಣವಾಗಿದೆ. ಹಲವಾರು ತಿಂಗಳಿಂದ ವೈದ್ಯರು ಇಲ್ಲದಿದ್ದು, ಹೆರಿಗೆ ವಿಭಾಗದಲ್ಲಿ ಬೆಡ್‌ಗಳು ಖಾಲಿ ಇವೆ.
ತಾಲೂಕಿನ ಕೇಂದ್ರ ಸರ್ಕಾರಿ ಆಸ್ಪತ್ರೆ ಇದಾಗಿದ್ದು, ಬಜಗೋಳಿ, ಮಾಳ, ಈದು, ಪಳ್ಳಿ, ಬೈಲೂರು, ಅಜೆಕಾರು, ಇನ್ನಾ, ಮುಂಡ್ಕೂರು, ಬೆಳ್ಮಣ್ ಸಹಿತ ಹಲವು ಹಳ್ಳಿಗಳಿಂದ ಗರ್ಭಿಣಿಯರು ಪ್ರಸವಕ್ಕಾಗಿ ಇಲ್ಲಿಗೆ ಬರುತ್ತಿದ್ದು, ಸೇವೆ ದೊರಕದ ಹಿನ್ನೆಲೆಯಲ್ಲಿ ದೂರದ ಉಡುಪಿ ಹಾಗೂ ಮಂಗಳೂರು ಅಥವಾ ಖಾಸಗಿ ಆಸ್ಪತೆಯತ್ತ ಹೋಗಬೇಕಾದ ಅನಿವಾರ್ಯತೆಯಿದೆ.
ಹೆರಿಗೆಗೆಂದು ಆಸ್ಪತ್ರೆಗೆ ಬಂದ ಸಂದರ್ಭ ಪ್ರಕ್ರಿಯೆ ಸರಳವಿದ್ದಲ್ಲಿ ಆಸ್ಪತ್ರೆಯ ದಾದಿಯರೇ ನಿರ್ವಹಿಸುತ್ತಾರೆ. ಹೆರಿಗೆ ವೇಳೆ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದರೆ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡುತ್ತಾರೆ. ತುಂಬು ಗರ್ಭಿಣಿ ಮಹಿಳೆಯರು ಪ್ರಸವ ವೇದನೆಯಲ್ಲೇ ಸುಮಾರು 30 ರಿಂದ 40 ಕಿ.ಮೀ ದೂರದ ಜಿಲ್ಲಾ ಕೇಂದ್ರ ಆಸ್ಪತ್ರೆ ಅಥವಾ ಪಕ್ಕದ ಜಿಲ್ಲೆ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ಇಲ್ಲಿದೆ.
ಹೆರಿಗೆಗೆ ಸಂಬಂಧಿಸಿದ ಸೌಕರ್ಯಗಳಲ್ಲಿ ಕಾರ್ಕಳದ ಸರ್ಕಾರಿ ಆಸ್ಪತ್ರೆ ಒಂದು ಕಾಲದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಷ್ಟು ಉತ್ತಮವಿತ್ತು. ಆದರೆ ಇದೀಗ ವೈದ್ಯರ ಹಾಗೂ ಸಿಬ್ಬಂದಿ ಕೊರತೆಯಿಂದ ಸರಿಯಾದ ಸೇವೆಗಳು ಸಿಗದೆ ಪ್ರಯೋಜನಕ್ಕೆ ಬಾರದಂತಾಗಿದೆ.
ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಬರುವುದು ಬಡವರೇ. ಹಾಗಾಗಿ ತಾಲೂಕು ಆಸ್ಪತ್ರೆ ಹೆರಿಗೆ ವಿಭಾಗದಲ್ಲಿ ಕಾಯಂ ವೈದ್ಯರು ಹಾಗೂ ದಾದಿಯರ ನೇಮಕ ಮಾಡಲು ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಕಾರ್ಕಳದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬಹುತೇಕ ಹುದ್ದೆಗಳು ಖಾಲಿ ಬಿದ್ದಿವೆ. ಕಳೆದ ಆರು ತಿಂಗಳಿನಿಂದ ಪ್ರಸೂತಿ ತಜ್ಞರ ನೇಮಕಾತಿ ನಡೆದಿಲ್ಲ. ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಹಗಲು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಪ್ರತ್ಯೇಕ ವೈದ್ಯರ ಅವಶ್ಯಕತೆಯಿದೆ. ಜತೆಗೆ ಸಾಕಷ್ಟು ಪ್ರಮಾಣದಲ್ಲಿ ದಾದಿಯರ ನೇಮಕಾತಿಯೂ ಆಗಬೇೀಕಿದೆ.
ಆರೋಗ್ಯ ಇಲಾಖೆಯಿಂದ ಹುದ್ದೆ ಭರ್ತಿಗೆ ಪ್ರಯತ್ನ ನಡೆದಿದೆ. ಹುದ್ದೆ ಸ್ವೀಕರಿಸಲು ಯಾರೂ ಮುಂದಾಗಿಲ್ಲ. ತಜ್ಞ ವೈದ್ಯರ ನೇಮಕಾತಿ ಆಗಿಲ್ಲ. ವೈದ್ಯರ ನೇಮಕಾತಿಯ ನಿರೀಕ್ಷೆಯಲ್ಲಿದ್ದೇವೆ.-ಡಾ.ಶಶಿಕಲಾ, ಮುಖ್ಯ ವೈದ್ಯಾಧಿಕಾರಿ. ತಾಲೂಕು ಆಸ್ಪತ್ರೆ ಕಾರ್ಕಳ