

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಸ್ತೆ ಮಾರ್ಗಸೂಚಿ ಅನುಸರಣೆ ಹಾಗೂ ಪಾರ್ಕಿಂಗ್ ಸಮಸ್ಯೆ ನಿವಾರಣೆ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವತಿಯಿಂದ, ಸುಬ್ರಹ್ಮಣ್ಯ ಗ್ರಾಪಂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಭೆ ನಡೆಯಿತು.
ಕಾಶಿಕಟ್ಟೆಯಿಂದ ಸವಾರಿ ಮಂಟಪದ ತನಕ ಹಾಗೂ ಬೈಪಾಸ್ ರಸ್ತೆಯಲ್ಲಿ ಮುಂದೆ ಏಕಮುಖ ಸಂಚಾರ ವ್ಯವಸ್ಥೆ ಅಳವಡಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯಿಂದ ಸವಾರಿಮಂಟಪ ಹಾಗೂ ಬೈಪಾಸ್ ರಸ್ತೆಯಲ್ಲಿ ಒನ್‌ವೇ ಸಂಚಾರ ವ್ಯವಸ್ಥೆ ಮಾಡುವುದು. ಇಲ್ಲಿನ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಸಂಪೂರ್ಣ ನಿಷೇಧಿಸುವುದು. ಅಭಯ ಆಂಜನೇಯ ಗುಡಿಯ ಪಕ್ಕದ ಪಾರ್ಕಿಂಗ್ ಪ್ರದೇಶ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿಯ ರಸ್ತೆಯ ಕೆಳಭಾಗದ ಪ್ರದೇಶದಲ್ಲಿ ಪಾರ್ಕಿಂಗ್‌ಗೆ ಪೂರಕ ಕ್ರಮ ಕೈಗೊಳ್ಳುವುದು. ವಿಶೇಷ ದಿನಗಳಲ್ಲಿ ಇಂಜಾಡಿ ಮೈದಾನದಲ್ಲಿ ಪಾರ್ಕಿಂಗ್, ನಿಯೋ ಮೈಸೂರು ಕೆಫೆ ಮುಂಭಾಗ ಸ್ಥಳೀಯರ ಪಾರ್ಕಿಂಗ್‌ಗೆ ಅವಕಾಶ, ಸ್ಥಳೀಯ ಸಣ್ಣ-ಪುಟ್ಟ ಅಂಗಡಿಯವರಿಗೆ ಹಾಗೂ ಸಾಮಾನ್ಯರಿಗೆ ಯಾವುದೇ ಸಮಸ್ಯೆ ಆಗದಂತೆ ನಿರ್ಣಯಗಳನ್ನು ಕೈಗೊಳ್ಳುವುದು. 4 ಆಟೋ ರಿಕ್ಷಾ, 2 ಟ್ಯಾಕ್ಸಿಗಳು ಈ ರೀತಿ ನಿಲ್ದಾಣಗಳಲ್ಲಿ ನಿಲ್ಲಲು ಮಾತ್ರವೇ ಅವಕಾಶ ನೀಡುವ ಬಗ್ಗೆ ಸಲಹೆ ಸಭೆಯಲ್ಲಿ ನೀಡಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಾರ್ತಿಕ್, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ, ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸೋಮ ಬಿ, ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ, ಲೋಲಾಕ್ಷ ಕೈಕಂಬ, ಗ್ರಾ.ಪಂ ಸದಸ್ಯರು ಇದ್ದರು.
2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಸುಬ್ರಹ್ಮಣ್ಯದ ಪಾರ್ಕಿಂಗ್‌ಗೆ ಸಂಬಂಧಿಸಿ ಮಾಡಿರುವ ಆದೇಶವನ್ನು ಪ್ರಸ್ತುತ ದಿನಗಳಿಗೆ ಉಪಯುಕ್ತವಾಗುವಂತೆ ಬದಲಾವಣೆ ಮಾಡಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸಭೆ ಕರೆಯಲಾಗಿದೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯವನ್ನು ಪುತ್ತೂರು ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ಅನುಷ್ಠಾನ ಮಾಡಲಾಗುತ್ತದೆ. ಶೀಘ್ರ ಈ ಪ್ರಕ್ರಿಯೆ ನಡೆಸಲಾಗುವುದು ಎಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಾರ್ತಿಕ್ ಹೇಳಿದರು.
ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ದೇವಸ್ಥಾನದ ವತಿಯಿಂದ 6 ಮಂದಿ ಸಿಬ್ಬಂದಿಯನ್ನು ಟ್ರಾಫಿಕ್ ನಿರ್ವಹಣೆಗೆ ನಿಯೋಜನೆ ಮಾಡುವುದು. ಇವರೊಂದಿಗೆ ಓರ್ವ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ನಿಯಮ ಮೀರಿ ಪಾರ್ಕಿಂಗ್ ಮಾಡುವ ಅಥವಾ ನಿಯಮ ಉಲ್ಲಂಘಿಸುವ ವಾಹನಗಳಿಗೆ ಲಾಕ್ ಹಾಕುವ ಬಗ್ಗೆ ನಿರ್ಣಯಿಸಲಾಗಿದೆ. ಸಭೆಯಲ್ಲಿ ಭಾಗವಹಿಸಿದ ಸಾರ್ವಜನಿಕರು, ಅಧಿಕಾರಿಗಳು, ಗ್ರಾ.ಪಂ ಸದಸ್ಯರು ಸಲಹೆ ನೀಡಿದರು. ನೂತನ ಪಾರ್ಕಿಂಗ್ ನಿಯಮಾವಳಿ ಬಗ್ಗೆ ತಯಾರಿಸಿದ ನೀಲ ನಕಾಶೆ ಮೂಲಕ ಠಾಣಾಧಿಕಾರಿ ಕಾರ್ತಿಕ್ ಮಾಹಿತಿ ನೀಡಿದರು. ಸ್ಥಳೀಯ ಬದಲಾವಣೆ ನಡೆಸಬೇಕಾದ ಬಗ್ಗೆ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು.