ಪ್ರಚೋದನೆಗೆ ಒಳಗಾದ ಕುನ್ನಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿ- ಎಂಎಲ್‌ಸಿ ಸಿ.ಟಿ.ರವಿ ಆಗ್ರಹ

allwyn_280920_ctravi1
Published on



ಮಂಗಳೂರು : ಪಾಕಿಸ್ತಾನದ ಕುನ್ನಿಗಳೇ ಎನ್ನುವ ಘೋಷಣೆಯಿಂದ ಪ್ರಚೋದನೆಗೆ ಒಳಗಾದವರು ಬೋಳಿಯಾರ್‌ನಲ್ಲಿ ಚೂರಿಯಿಂದ ಇರಿದಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಈ ಘೋಷಣೆಯಿಂದ ದೇಶ ಪ್ರೇಮ ಇರುವವರು ಪ್ರಚೋದನೆಗೆ ಒಳಗಾಗಲು ಸಾಧ್ಯವೇ ಇಲ್ಲ. ಒಂದೊಮ್ಮೆ ಇಲ್ಲಿರುವ ಪಾಕಿಸ್ತಾನದ ಕುನ್ನಿಗಳು ಪ್ರಚೋದನೆಗೆ ಒಳಗಾಗಿದ್ದರೆ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಬಿಜೆಪಿ ನಾಯಕ, ಎಂಎಲ್‌ಸಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಶನಿವಾರ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರಿಗೆ ಮತಾಂಧರು ಥಳಿಸಿ ಚೂರಿಯಿಂದ ಇರಿದಿದ್ದಾರೆ. ಆದರೆ ಪೊಲೀಸರು ಬಿಜೆಪಿ
ಕಾರ್ಯಕರ್ತರ ಮೇಲೆ ಕೌಂಟರ್ ಕೇಸು ಹಾಕಿದ್ದಾರೆ ಎಂದರು.
ಪಾಕಿಸ್ತಾನದ ಕುನ್ನಿಗಳೇ ಎನ್ನುವ ಘೋಷಣೆಗೆ ಆಕ್ರೋಶಗೊಂಡು ಚೂರಿಯಿಂದ ಇರಿದದ್ದು ಹೌದಾದರೆ ಸ್ಪೀಕರ್ ಖಾದರ್ ಕ್ಷೇತ್ರದಲ್ಲಿ ಪಾಕಿಸ್ತಾನದ ಕುನ್ನಿಗಳು ಇರುವುದು ಸ್ಪಷ್ಟವಾಗಿದೆ. ಅಂತಹ ನಮಕ್ ಹರಾಮ್‌ಗಳನ್ನು ಗುರುತಿಸಿ ಗಡಿ ಪಾರು ಮಾಡಿ. ಐಸಿಸ್ ಜತೆ ಸಂಬಂಧ ಇರಿಸಿಕೊಂಡವರು ಹೊರಗಿನವರು. ಭಾರತ ವಿರೋಧಿಗಳು ಹೊರಗಿನವರು ಎನ್ನುವುದನ್ನು ಸ್ಪೀಕರ್ ಖಾದರ್ ಅರಿತುಕೊಳ್ಳಬೇಕು. ಇರಿತಕ್ಕೆ ಒಳಗಾದವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಸ್ಪೀಕರ್ ಮತ್ತು ಉಸ್ತುವಾರಿ ಸಚಿವರು ಗಾಯಾಳುಗಳನ್ನು ಭೇಟಿಯಾಗಿಲ್ಲ. ಒಂದೊಮ್ಮೆ ಪಾಕಿಸ್ತಾನದ ಕುನ್ನಿಗಳು ಚಿಕಿತ್ಸೆ ಪಡೆಯುತ್ತಿದ್ದರೆ ಸಾಂತ್ವನ ಹೇಳುತ್ತಿದ್ದರು ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ಪಾಕಿಸ್ತಾನದ ಕುನ್ನಿಗಳೇ ಎನ್ನುವ ಘೋಷಣೆ ಇಲ್ಲಿನವರಿಗೆ ಹೇಗೆ ಅನ್ವಯವಾಗುತ್ತದೆ. ಪಾಕಿಸ್ತಾನದ ಕುನ್ನಿಗಳಿಗೆ ಮಾತ್ರ
ಅನ್ವಯವಾಗಲು ಸಾಧ್ಯ ? ಸಾವಿರ ಬಾರಿ ಇಂತಹ ಘೋಷಣೆ ಕೂಗಲು ಸಿದ್ದರಿದ್ದೇವೆ. ಮಂಗಳೂರು ಪೊಲೀಸ್ ಆಯುಕ್ತರು ಪಾಕಿಸ್ತಾನದ ಪೊಲೀಸ್ ಆಯುಕ್ತರ ಹಾಗೆ ವರ್ತಿಸ ಬಾರದು. ಪ್ರಚೋದನೆಗೆ ಒಳಗಾಗಿ ಇರಿದಿದ್ದೇವೆ ಎಂದು ಹೇಳಿಕೆ ನೀಡಿದವರನ್ನು ಪೊಲೀಸ್ ಆಯುಕ್ತರು ತನಿಖೆ ನಡೆಸಬೇಕು. ಮಸೀದಿಯ ಸಿಸಿ ಟಿವಿ ಪರಿಶೀಲಿಸಿದ ಬಳಿಕ ಅವರು ಹೇಳಿಕೆ ನೀಡಬೇಕಿತ್ತು. ಅದಕ್ಕೆ ಮೊದಲೇ ರಾಜಕೀಯ ಪಕ್ಷದ ಕೈಗೊಂಬೆಯಾಗಿ ಹೇಳಿಕೆ ನೀಡಿದ್ದಾರೆ . ಆಯುಕ್ತರ ಹೇಳಿಕೆಯಿಂದ ದೇಶಭಕ್ತ ಮುಸ್ಲಿಮರಿಗೆ ಅವಮಾನವಾಗಿದೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹತ್ಯೆ ಮತ್ತು ಆತ್ಮಹತ್ಯೆ ಮಿತಿ ಮೀರಿದೆ. ಕಳೆದ 4 ತಿಂಗಳಲ್ಲಿ 50 ಹತ್ಯೆ ಪ್ರಕರಣ ನಡೆದಿದೆ. 700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ರಿಮಿನಲ್ ಮತ್ತು ಕಮ್ಯುನಲ್‌ಗೆ ಸರ್ಕಾರವೇ ಬೆಂಬಲ ನೀಡುತ್ತಿರುವ ಪರಿಣಾಮ ಕರ್ನಾಟಕ ಇಂದು ಕೆಟ್ಟ ಸುದ್ದಿಗಳಿಗೆ ಪ್ರಚಾರ ಪಡೆಯುತ್ತಿದೆ. ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುತ್ತಿರುವ ಸರ್ಕಾರ ಡಿಜಿ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ ಜೈಲು ಪಾಲಾದವರನ್ನು ಅಮಾಯಕರೆಂದು ಬಿಂಬಿಸಲು ಯತ್ನಿಸುತ್ತಿದೆ. ರಸ್ತೆ ಮಧ್ಯೆ ನಮಾಜ್ ಮಾಡಿದವರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದವರ ಮೇಲೆ ಕೇಸು ದಾಖಲಿಸುವ ಪೊಲೀಸರ ಮೂಲಕ ಸರ್ಕಾರ ಸಮಾಜಕ್ಕೆ ಏನು ಸಂದೇಶ ನೀಡುತ್ತಿದೆ ? ಮತ ಬ್ಯಾಂಕಿಗಾಗಿ ಕಾಂಗ್ರೆಸ್ ಮತಾಂಧರನ್ನು ಬೆಂಬಲಿಸುತ್ತಿದೆ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಕಿಶೋರ್ ಪುತ್ತೂರು, ಮುಖಂಡರಾದ ನಿತಿನ್‌ಕುಮಾರ್, ಜಗದೀಶ್ ಶೇಣವ, ವಸಂತ ಪೂಜಾರಿ ಉಪಸ್ಥಿತರಿದ್ದರು.




ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net