ಇನ್ನು ಚಲೋ ಬದಲು ಡಿಕೆಬಿಓಎ ಸ್ಟೂಡೆಂಟ್ ಕಾರ್ಡ್; ಶೀಘ್ರದಲ್ಲೇ ಯುಪಿಐ ಮೂಲಕ ಟಿಕೇಟ್ ಖರೀದಿ, ಜಿಪಿಎಸ್ ಸೌಕರ್ಯ

mng- june 15- dkboa ticket card
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ ಹಾಗೂ ಚಲೋ ಕಂಪನಿಯ ಸಹಯೋಗದೊಂದಿಗೆ ಕಳೆದ ಮೂರು ವರ್ಷ ಮೊದಲು ನಗದು ರಹಿತ ಡಿಜಿಟಲೀಕರಣ ಆರಂಭಿಸಲಾಗಿದ್ದು, ಇಲ್ಲಿಯ ತನಕ ‘ಚಲೋ ಕಾರ್ಡ್’ ಮೂಲಕ ನೀಡುತ್ತಿದ್ದ ವಿದ್ಯಾರ್ಥಿಗಳ ಪಾಸ್ ಅನ್ನು ‘ಡಿಕೆಬಿಓಎ ಸ್ಟೂಡೆಂಟ್ ಕಾರ್ಡ್’ ಆಗಿ ಪರಿವರ್ತಿಸಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಅವರು, ಡಿಜಿಟಲೀಕರಣ ಪ್ರಕ್ರಿಯೆ ಮುಂದುವರಿಯಲಿದ್ದು, ಶೀಘ್ರದಲ್ಲೇ ಸಾರ್ವಜನಿಕ ಪ್ರಯಾಣಿಕರು ಯುಪಿಐ ಮೂಲಕ ಬಸ್ ಟಿಕೆಟ್ ಖರೀದಿಸುವ ವ್ಯವಸ್ಥೆ ಹಾಗೂ ಬಸ್ ವೇಳಾಪಟ್ಟಿ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಜಿಪಿಎಸ್ ಮೂಲಕ ನಿಯಂತ್ರಿಸುವ ವ್ಯವಸ್ಥೆಯನ್ನು ಕೂಡ ಒದಗಿಸಲಾಗುವುದು ಎಂದರು.
ಸಂಘದ ವತಿಯಿಂದ ವರ್ಷಂಪ್ರತಿ ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ಶೇ.60 ರಿಯಾಯಿತಿ ದರದಲ್ಲಿ ಫಾಸ್‌ಗಳನ್ನು ಒದಗಿಸಕಾಗುತ್ತಿದೆ. ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಕಳೆದ 43 ವರ್ಷಗಳಿಂದ ಸುಮಾರು 7,21,000 ವಿದ್ಯಾರ್ಥಿಗಳಿಗೆ 16.11 ಕೋಟಿ ರೂ ಮೊತ್ತದ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳು ಶೇ.60 ರಿಯಾಯಿತಿಯೊಂದಿಗೆ ತಮಗೆ 40 ಹಾಗೂ 50 ಟ್ರಿಪ್‌ಗಳ ಪಾಸ್‌ಗಳನ್ನು ಪಡೆದು ಬಸ್‌ಗಳಲ್ಲಿ ಪ್ರಯಾಣಿಸಬಹುದು. ಈ ಕೊಡುಗೆಯು ಹಿಂದಿನಂತೆಯೇ ವಿದ್ಯಾರ್ಥಿಯ ವಾಸಸ್ಥಳದಿಂದ ಶಾಲಾ ಕಾಲೇಜು ತನಕ ತನಕ ಅನ್ವಯವಾಗುತ್ತದೆ. ಸಾರ್ವಜನಿಕ ಪ್ರಯಾಣಿಕರಿಗೂ ಹಿಂದಿನಂತೆಯೇ ಚಲೋ ಕಾರ್ಡ್‌ಗಳಿದ್ದು, ತಮಗೆ ಬೇಕಾದಷ್ಟು ಮೊತ್ತವನ್ನು ರೀಚಾರ್ಜ್ ಮಾಡಿ ಬಸ್‌ಗಳಲ್ಲಿ ಪ್ರಯಾಣಿಸಬಹುದು. ಪ್ರತಿ ಪ್ರಯಾಣಕ್ಕೆ ರಿಯಾಯಿತಿ ದೊರೆಯಲಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ರಿಯಾಯಿತಿ ದರದ ಪ್ರಯೋಜನ ಪಡೆಯಲು ಜುಲೈ 1 ರಿಂದ ಡಿಕೆಬಿಓಎ ನಿಂದ ಮಾನ್ಯವಾದ ಬಸ್ ಪಾಸ್ ಪಡೆಯುವುದು ಕಡ್ಡಾಯವಾಗಿದೆ. ವಿದ್ಯಾರ್ಥಿ ಬಸ್ ಪಾಸ್ ಅನ್ನು ಡಿಕೆಬಿಓಎ ವಿದ್ಯಾರ್ಥಿ ಕಾರ್ಡ್‌ನಲ್ಲಿ ಖರೀದಿಸಬಹುದು ಮತ್ತು ಒಮ್ಮೆ ಖರೀದಿಸಿದರೆ 40 ದಿನಗಳ ಅವಧಿಗೆ ಮಾನ್ಯವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ರಾಮಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ, ಚಲೋ ಕಂಪನಿಯ ಪ್ರಸಾದ್, ಅಮೃತ್, ಆಶಿಷ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net