

ಬೆಂಗಳೂರು: ಸಂಗೀತದ ಮೂಲಕ ಜೀವಾತ್ಮಕ್ಕೆ ಬೇಕಾದ ಅಲೌಕಿಕ ಸಂತೋಷ, ನೆಮ್ಮದಿ ಭಾವ ದೊರೆಯಲಿದೆ. ಇದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಬಹುದಾಗಿದೆ. ಈ ನಿಟ್ಟಿನಲ್ಲಿ ಸಂಗೀತ ಎಂಬ ನಾದಲೋಕದಿಂದ ಧ್ಯಾನಲೋಕಕ್ಕೆ ಕರೆದೊಯ್ಯುವ ಶಕ್ತಿ ಆರ್.ಕೆ. ಪದ್ಮನಾಭ ಅವರ ಗಾಯನಕ್ಕಿದೆ ಎಂದು ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಸ್ಥಾಪಕ, ಅಧ್ಯಾತ್ಮ ಚಿಂತಕ ಸದ್ಗುರು ಶ್ರೀ ಮಧುಸೂದನ್ ಸಾಯಿ ಹೇಳಿದ್ದಾರೆ.
ಸಂಗೀತ ವಿದ್ವಾಂಸ ವಿದ್ವಾನ್ ಡಾ.ಆರ್.ಕೆ. ಪದ್ಮನಾಭ ಅವರ 75ನೇ ಜನ್ಮದಿನ ಹಾಗೂ 50 ವರ್ಷಗಳ ಅವರ ಸಂಗೀತ ಪಯಣದ ಹಿನ್ನೆಲೆಯಲ್ಲಿ ವಿದ್ವಾನ್ ಡಾ. ಆರ್.ಕೆ. ಪಿ. ಅಭಿನಂದನಾ ಸಮಿತಿಯು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಪದ್ಮನಾದೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ, ‘ಗಾನ ಕಲಾ ಬ್ರಹ್ಮರ್ಷಿ’ ಬಿರುದು ಪ್ರದಾನ ಮಾಡಿ ಮಾತನಾಡಿದರು.
ಆರ್‌ಕೆಪಿ ಅವರ ಸಂಗೀತ ದೈವಿಕತೆಯಿಂದ ಕೂಡಿದೆ. ಗಾಯಕ ಮಾತ್ರವಲ್ಲದೆ ಆಧ್ಯಾತ್ಮಿಕ ಚಿಂತಕರೂ ಆಗಿದ್ದಾರೆ. ಸಮಾಜ ಸುಧಾರಕರಾಗಿಯೂ ಕೊಡುಗೆಗಳನ್ನು ನೀಡಿದ್ದಾರೆ. ಈ ಕಾರ್ಯಕ್ರಮವು ಸಂಗೀತ ಶಕ್ತಿಯೊಂದಿಗೆ ಗುರುಭಕ್ತಿಗೂ ಸಾಕ್ಷಿಯಾಗಿದೆ ಎಂದ ಅವರು, ಡಾ. ಆರ್‌ಕೆಪಿ ಹೆಸರಲ್ಲಿ ತಮ್ಮ ವಿವಿಯಲ್ಲಿ ಸಂಗೀತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಆರ್‌ಕೆಪಿ ಅವರ ಜೀವನ ಕುರಿತ ಸಾಕ್ಷ್ಯಚಿತ್ರ ಹಾಗೂ ಆರ್‌ಕೆಪಿ ರಚನೆಯ ‘ಸುವರ್ಣಗಾನ’ ಹಾಗೂ ‘ಬೇವುಬೆಲ್ಲ’ ಕಾದಂಬರಿಗಳು ಹಾಗೂ ಕೆಲವು ನಾಟಕಗಳು ಮತ್ತು ಲೇಖನ ಕೃತಿಗಳು ಲೋಕಾರ್ಪಣೆಗೊಂಡವು. ಬಳಿಕ ಅವರು ಮೂಲಕ ಜನಮನ ರಂಜಿಸಿದರು.
ಇದೇ ವೇಳೆ ಕಲಾವಿದರಾದ ವಿದ್ವಾನ್ ಮೈಸೂರು ಎಂ. ಮಂಜುನಾಥ್ ಹಾಗೂ ವಿದ್ವಾನ್ ಮೈಸೂರ್ ಎಂ. ನಾಗರಾಜ್ ಅವರ ಯುಗಳ ಪಿಟೀಲು ವಾದನ ನಡೆಸಿಕೊಟ್ಟರು. ಆರ್‌ಕೆಪಿ ಶಿಷ್ಯಂದಿರು ಪದ್ಮನಾದಾಂಜಲಿ ವಿಶೇಷ ಕಾರ್ಯಕ್ರಮ ಪ್ರಸ್ತುತಪಡಿಸಿದರು.