ಇಂದಿನಿಂದ ನೇತ್ರಾವತಿ ಸಂರಕ್ಷಣೆ ಪಾದಯಾತ್ರೆ

Published on

ಬಂಟ್ವಾಳ: ನೇತ್ರಾವತಿ ಕೇವಲ ಈ ಜಿಲ್ಲೆಯ ಜಲ ಮೂಲಕ್ಕಷ್ಟೇ ಇರುವ ನದಿಯಲ್ಲ, ಇದು ಇಲ್ಲಿನ ಜನರ ಜನಜೀವನದ ಜತೆಗೆ ಹಾಸುಹೊಕ್ಕಾಗಿರುವ ಜೀವನೋಪಾಯದ ಅಡಿಪಾಯವೂ ಹೌದು, ಭಾವಬಂಧದ ನಂಬಿಕೆಯನ್ನು ಪೋಷಿಸುವ ಸೆಲೆಯೂ ಹೌದು, ಈ ಮಣ್ಣಿನ ಸಾಂಸ್ಕೃತಿಕ ಹರಿವೂ ಹೌದು. ಹಾಗಾಗಿ ಈ ನದಿಯನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದ್ದು, ಇದರ ಸಂರಕ್ಷಣೆಗೆ ಸಾರ್ವಜನಿಕರು, ಪುರಸಭೆ, ನಗರಾಡಳಿತದ ಗಮನಸೆಳೆಯಲು ಮತ್ತು ಪ್ರೇರೇಪಿಸಲು ಕರ್ನಾಟಕ ಯುವಮುನ್ನಡೆ ತಂಡವು ಜುಲೈ 7 ರಿಂದ 9ರ ತನಕ ಪರಿಸರ ನ್ಯಾಯಕ್ಕಾಗಿ ಯುವಧ್ವನಿ ನೀರ ದಾರಿಯ ನಡೆ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.

ಈ ಪಾದಯಾತ್ರೆ ಬಂಟ್ವಾಳದ ಬಡ್ಡಕಟ್ಟೆಯಿಂದ ಆರಂಭವಾಗಿ ಉಳ್ಳಾಲದಲ್ಲಿ ನೇತ್ರಾವತಿ ನದಿ ಸಮುದ್ರ ಸೇರುವಲ್ಲಿಗೆ ಕೊನೆಯಾಗಲಿದೆ. ಪಾದಯಾತ್ರೆಯ ದಾರಿಯುದ್ದಕ್ಕೂ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪುರಸಭೆ, ಗ್ರಾ.ಪಂ, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಭೇಟಿ ಮಾಡುತ್ತ ಮುಂದೆ ಸಾಗುವುದು.

ರೈತರ ಜೊತೆ ಸಂವಾದ ನಡೆಸುವುದು, ನಂದಾವರ ದೇವಸ್ಥಾನ, ಪಾವೂರು ದ್ವೀಪ- ದರ್ಗಾ ಭೇಟಿ, ಹರೇಕಳ ಬಿಡ್ಜ್ ಕಂ ಬ್ಯಾರೇಜ್, ತುಂಬೆ ವೆಂಟೆಡ್ ಡ್ಯಾಂ, ನೀರು ಶುದ್ಧೀಕರಣ ಘಟಕ ವೀಕ್ಷಣೆ, ದೋಣಿ ಪಯಣ ಮಾಡುತ್ತ ಪಾದಯಾತ್ರೆ ಸಾಗಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net