

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸರೋಜ್ ಆಹಾರ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿದರು.
ಆಹಾರ ಮತ್ತು ಪೌಷ್ಟಿಕಾಂಶ, ಆರೋಗ್ಯ ಮತ್ತು ರುಚಿಯ ಪರಿಪೂರ್ಣ ಮಿಶ್ರಣ, ಸರೋಜ್ ಫುಡ್ಸ್ ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಖಾರದ ತಯಾರಕರ ಪ್ರಮುಖ ಘಟಕ ಇದಾಗಿದ್ದು, ಈ ಮೂಲಕ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ನೀಡುವ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸರೋಜ್ ಫುಡ್ ಇಂಡಸ್ಟ್ರೀಸ್ ಸಿಬ್ಬಂದಿ ಮಾಹಿತಿ ನೀಡಿ ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಬಹುತೇಕ ಎಲ್ಲ ಸಾಂಪ್ರದಾಯಿಕ ಸಿಹಿತಿಂಡಿಗಳು ಸಾಮಾನ್ಯವಾಗಿ ಆರೋಗ್ಯಕ್ಕೆ ಕೆಟ್ಟ ಸಕ್ಕರೆಯ ಅಂಶ ಹೊಂದಿರುತ್ತವೆ. ಹೆಚ್ಚು ಸಕ್ಕರೆ ಸೇವನೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಯಾವುದೇ ಸಂರಕ್ಷಕಗಳು ಮತ್ತು ಸಕ್ಕರೆ ಹೊಂದಿರದ ಆಹಾರ ಸೇವಿಸುವ ಜನರಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮ ಪ್ರೇಕ್ಷಕರಿಗೆ ಸಾಂಪ್ರದಾಯಿಕ ಆಹಾರ ಉತ್ಪನ್ನಗಳನ್ನು ನೀಡುವ ಗುರಿಯೊಂದಿಗೆ 1997ರಲ್ಲಿ ಸಕ್ಕರೆ ಬದಲಿಗೆ ಬೆಲ್ಲದಿಂದ ಮಾಡಿದ ಆರೋಗ್ಯಕರ ಸಿಹಿತಿಂಡಿಗಳನ್ನು ನೀಡಲು ಪ್ರಾರಂಭಿಸಿದ್ದೇವೆ ಎಂದರು.
ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ನಮ್ಮೂರಿನ ಹೆಮ್ಮೆ ಈ ಕೈಗಾರಿಕಾ ವಲಯ, ಸ್ವದೇಶಿ ಹಾಗೂ ಪಾರಂಪರಿಕ ತಿಂಡಿ ತಿನಿಸುಗಳು ಆಧುನಿಕ ಆಹಾರ ಪದ್ಧತಿಗಳ ಮುಂದೆ ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ವಾಣಿಜ್ಯ ವಿಭಾಗದ ಕಲಿಕೆಯೊಂದಿಗೆ ಸಾಂಪ್ರದಾಯಿಕ ಆಹಾರ ತಯಾರಿಕಾ ಕ್ರಮ ಹಾಗೂ ಅದರ ಮಾರುಕಟ್ಟೆಯ ಕುರಿತಾದ ಪ್ರಾಯೋಗಿಕ ಮಾಹಿತಿ ಸಿಗಬೇಕು ಎಂಬ ಪ್ರಯತ್ನ ಇದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಮಾತನಾಡಿ, ವಾಣಿಜ್ಯ ವಿಭಾಗದ ಮಕ್ಕಳಿಗೆ ನಮ್ಮ ದೇಶದಲ್ಲಿ ಪ್ರಾರಂಭದಲ್ಲಿ ಆಹಾರ ಮಾರುಕಟ್ಟೆ ವಿನ್ಯಾಸ ಹೇಗಿತ್ತು ಎಂಬ ಕಲ್ಪನೆಯನ್ನು ಮತ್ತು ಸ್ವದೇಶಿ ಉತ್ಪನ್ನಗಳ ಮಾರುಕಟ್ಟೆ ಸ್ಥಾಪನೆ ಮಾಡುವುದರ ಹಿಂದಿನ ಈಗಿನ ಅನಿವಾರ್ಯತೆಯ ಜತೆಗೆ ಅದರ ಆಗುಹೋಗುಗಳನ್ನು ತಿಳಿಸುವ ಕೆಲಸವನ್ನು ಇಂದಿನ ಕೈಗಾರಿಕಾ ಭೇಟಿ ಕಾರ್ಯಕ್ರಮ ಮಾಡಿರುತ್ತದೆ ಎಂದರು.
ವಾಣಿಜ್ಯ ವಿಭಾಗದ ಡೀನ್ ಸಂತೋಷ್, ವಿಭಾಗ ಮುಖ್ಯಸ್ಥರಾದ ಪ್ರಸನ್ನ, ಲೆಕ್ಕಶಾಸ್ತ್ರ ಪ್ರಾಧ್ಯಾಪಕ ರವಿ ಹಾಗೂ ಆಂಗ್ಲಭಾಷಾ ಪ್ರಾಧ್ಯಾಪಕಿ ಅರ್ಪಿತಾ ಎಂ.ಕೈಗಾರಿಕಾ ಭೇಟಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.