ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಆಕ್ಸಿಜನ್ ಸಿಲಿಂಡರ್ ಕಳ್ಳತನ; ಆಸ್ಪತ್ರೆ ಸಿಬ್ಬಂದಿಯ ಕೈವಾಡ ಶಂಕೆ!

Oxygen
ಸಾಂದರ್ಭಿಕ ಚಿತ್ರ
Published on

ಚಿಕ್ಕಬಳ್ಳಾಪುರ: ಕರೊನಾ ಸೋಂಕು ಎಲ್ಲೆಡೆ ತೀವ್ರಗತಿಯಲ್ಲಿ ಏರುತ್ತಿದ್ದರೆ ಮತ್ತೊಂದೆಡೆ ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್​ಗಳು ಸಿಗದೆ ಸೋಂಕಿತರು ಉಸಿರುಗಟ್ಟಿ ಒದ್ದಾಡಿ ಕೊನೆಯುಸಿರೆಳೆದಿದ್ದಾರೆ. ರಾಜ್ಯದಲ್ಲಿ ಇಂಥ ಪರಿಸ್ಥಿತಿ ಇರುವಾಗಲೂ ಆಕ್ಸಿಜನ್​ ಸಿಲಿಂಡರ್​ಗಳನ್ನು ಕಳವು ಮಾಡಿದ ಪ್ರಕರಣವೂ ವರದಿಯಾಗಿದೆ. ಅದರಲ್ಲೂ ಆರೋಗ್ಯ ಸಚಿವರ ಉಸ್ತುವಾರಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಇಂಥದ್ದೊಂದು ಘಟನೆ ಸಂಭವಿಸಿದೆ.

ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವೇಳೆ ಹತ್ತು ಆಕ್ಸಿಜನ್ ಸಿಲಿಂಡರ್​​ಗಳು ಕಳವಾಗಿದ್ದು, ಮಾರನೇ ದಿನ ಬೆಳಕಿಗೆ ಬಂದಿದೆ. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಚಿಕ್ಕಬಳ್ಳಾಪುರ ಪೊಲೀಸರಿಗೆ ದೂರು ನೀಡಿದ್ದು, ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಕ್ಸಿಜನ್ ಸಿಲಿಂಡರ್​ಗಳನ್ನು ಇರಿಸಲಾಗಿದ್ದ ಕೋಣೆಯ ಕೀಗಳು ಡಾ.ವಿಜಯಲಕ್ಷ್ಮೀ, ಡಿ ದರ್ಜೆ ನೌಕರ ಮುನಿರಾಜು ಅವರ ಬಳಿ ಮಾತ್ರ ಇವೆ. ಅಲ್ಲದೆ ಈ ಕಳ್ಳತನದ ಹಿಂದೆ ಆಸ್ಪತ್ರೆ ಸಿಬ್ಬಂದಿಯ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲೆಡೆ ಆಕ್ಸಿಜನ್​ ಸಿಲಿಂಡರ್​ಗೆ ಬೇಡಿಕೆ ಹೆಚ್ಚಾಗಿರುವುದರಿಂದ ದುಬಾರಿ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಕಳವು ನಡೆದಿರಬಹುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net