ಅಂಗಾಂಗ ದಾನದಿಂದ ನಾಲ್ವರಿಗೆ ಜೀವದಾನ

Manjunath - Organ doner
Published on

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ 48 ವರ್ಷದ ವ್ಯಕ್ತಿಯ ಅಂಗಾಂಗ ದಾನಕ್ಕೆ ಆತನ ಕುಟುಂಬದ ಸದಸ್ಯರು ಸಮ್ಮತಿಸುವ ಮೂಲಕ ನಾಲ್ವರು ರೋಗಿಗಳಿಗೆ ಜೀವದಾನಕ್ಕೆ ನೆರವಾಗಿದ್ದಾರೆ.

ಮೃತ ಮಂಜುನಾಥ್‌ರ ಕಿಡ್ನಿ, ಲಿವರ್, ಹೃದಯ ಕವಾಟ ಮತ್ತು ಕಾರ್ನಿಯಾವನ್ನು ಪಡೆದು ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಲ್ಲಿ ಅಂಗಾಂಗ ಕಸಿಗಾಗಿ ಹೆಸರು ನೋಂದಾಯಿಸಿ ರೋಗಿಗಳಿಗೆ ಕಸಿ ನಡೆಸಲಾಗಿದೆ.

ಅಸ್ಸಾಂ ಮೂಲಕ ರೋಗಿಗೆ ಲಿವರ್ ಮತ್ತು ಕಿಡ್ನಿ ಕಸಿ ಮಾಡಲಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋಯುರಾಲಜಿ ಸಂಸ್ಥೆಯಲ್ಲಿದ್ದ ರೋಗಿಗೆ ಮತ್ತೊಂದು ಕಿಡ್ನಿ ಕಸಿ ಮಾಡಲಾಗಿದೆ. ಹೃದಯ ಕವಾಟವನ್ನು ಶ್ರೀ ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ನೀಡಲಾಗಿದ್ದು, ಕಾರ್ನಿಯಾಗಳನ್ನು ಪ್ರಭಾ ಐ ಕ್ಲಿನಿಕ್‌ನ ರೋಗಿಗಳಿಗೆ ಕಸಿ ಮಾಡುವ ಮೂಲಕ ಇಬ್ಬರಿಗೆ ದೃಷ್ಟಿ ಮರಳಿವಂತೆ ಮಾಡಲಾಗಿದೆ.

ಡಿ. 14 ಸಂಜೆ 6.30ರ ಸಮಯದಲ್ಲಿ ಮಂಜುನಾಥ್ ಎಂಬುವರು ತಮ್ಮ ಮೂವರು ಅಂಧ ಸಹಪಾಠಿಗಳೊಂದಿಗೆ ಬೆಂಗಳೂರು ಮೈಸೂರು ರಸ್ತೆಯ ಕುಂಬಳಗೂಡು ಸಮೀಪದ ಕದಂಬ ಹೋಟೆಲ್ ಬಳಿ ರಸ್ತೆ ದಾಟುತ್ತಿದ್ದಾಗ ಕ್ಯಾಂಟರ್ ಅವರಿಗೆ ಡಿಕ್ಕಿ ಹೊಡೆದಿತ್ತು. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಒಬ್ಬರು ಭುಜದ ಮೂಳೆ ಮುರಿದಿದೆ. ಮಂಜುನಾಥ್ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅವರನ್ನು ನಗರದ ಗ್ಲೇನಿಗಲ್ಸ್ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ವೈದ್ಯರು ಪ್ರಯತ್ನಗಳ ಬಳಿಕವೂ ಚೇತರಿಸಿಕೊಳ್ಳದ ಕಾರಣ 16ರಂದು ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ್ದರು.

ಹಾಡು ಹಾಡಿ ಜೀವನ ನಿರ್ವಹಣೆ

ಮಂಜುನಾಥ್ 5ನೇ ತರಗತಿಯಲ್ಲಿದ್ದಾಗ ಕ್ರಿಕೆಟ್ ಚೆಂಡು ಮೂಗಿಗೆ ತಾಗಿ ದೃಷ್ಟಿ ಸಮಸ್ಯೆ ಉಂಟಾಗಿತ್ತು. ಕಾಲ ಕಳೆದಂತೆ ದೃಷ್ಟಿ ಕ್ಷೀಣಿಸುತ್ತ ಹೋಗಿ, 38ನೇ ವಯಸ್ಸಿನಲ್ಲಿ ಪೂರ್ಣ ದೃಷ್ಟಿ ಕಳೆದುಕೊಮಡಿದ್ದರು. ಜೀವನ ನಿರ್ವಹಣೆಗಾಗಿ ಬಸ್ ನಿಲ್ದಾಣಗಳ ಬಳಿ ಹಾಡು ಹಾಡಿ ಹಣ ಸಂಪಾದಿಸುತ್ತಿದ್ದರು. ಪತ್ನಿ ಹಾಗೂ 10 ವರ್ಷದ ಪುತ್ರನನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net