ನಾಮಫಲಕದಲ್ಲೇ ದೊಡ್ಡ ಲೋಪ !: ಮೊಗ್ರಾಲ್, ಅಣಂಗೂರ್ ಬೋರ್ಡ್‌ಗಳಲ್ಲಿ ದೋಷ : ಅಧಿಕಾರಿಗಳ ನಿರ್ಲಕ್ಷ್ಯ, ತಿದ್ದುಪಡಿಗೆ ನಕಾರ

New Project (11)
Published on

ವಿಜಯವಾಣಿ ಸುದ್ದಿಜಾಲ ಕುಂಬಳೆ

ಸರಿಯಾದ ದಾರಿ ತೋರಿಸಬೇಕಾದ ನಾಮಫಲಕಗಳಲ್ಲಿಯೇ (ಸೈನ್‌ಬೋರ್ಡ್) ಅಕ್ಷರ ದೋಷಗಳಿದ್ದು, ಸಂಬಂಧಿಸಿದ ಇಲಾಖೆ ಈ ಕುರಿತು ಇನ್ನೂ ಇದರತ್ತ ಗಮನ ಹರಿಸದೇ ಇರುವುದು ವಿಪರ್ಯಾಸ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಅಳವಡಿಸಿದ ದಾರಿ ಸೂಚಕ ನಾಮಫಲಕಗಳಲ್ಲಿ ಅಕ್ಷರ ದೋಷಗಳು ಪತ್ತೆಯಾಗಿದ್ದು, ಜತೆಗೆ ತಪ್ಪು ದಾರಿ ಸೂಚಕಗಳೂ ಇವೆ. ಈ ಬೋರ್ಡ್‌ಗಳ ಆಧರಿಸಿ ತೆರಳಿದ ವಾಹನ ಸವಾರರು ಹಲವು ಬಾರಿ ತಪ್ಪು ದಾರಿಯಲ್ಲಿ ತೆರಳಿ ತೊಂದರೆಗಳಿಗೂ ಸಿಲುಕಿದ್ದಾರೆ.

ಸ್ಥಳೀಯರು ಈ ಲೋಪಗಳ ಕುರಿತು ನಿರ್ಮಾಣ ಕಂಪನಿಯ ಗಮನಕ್ಕೆ ತಂದಿದ್ದು, ಆದರೆ ಕಂಪನಿಯ ಅಧಿಕಾರಿಗಳು ಸ್ಥಳೀಯ ಪಂಚಾಯಿತಿ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಹಲವು ಬಸ್ ತಂಗುದಾಣಗಳ ಸ್ಥಳಾಂತರ ನಡೆಯುತ್ತಿದ್ದು, ಪ್ರಯಾಣಿಕರಿಗೆ ತೊಂದರೆಗಳಾಗುತ್ತಿವೆ.

ಮುಸ್ಲಿಂ ಯೂತ್‌ಲೀಗ್‌ನ ಗುಂಪೊಂದು ಬಸ್ ತಂಗುದಾಣಗಳನ್ನು ಮರುಸ್ಥಾಪಿಸುವಂತೆ ಜಿಲ್ಲಾಧಿಕಾರಿ ಹಾಗೂ ನಿರ್ಮಾಣ ಕಂಪನಿಯನ್ನು ಒತ್ತಾಯಿಸಿದ್ದು, ಈ ಕುರಿತು ಕೂಡಲೇ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಏನೇನು ಲೋಪಗಳಿವೆ?

ಹೆದ್ದಾರಿಯಲ್ಲಿ ಅಳವಡಿಸಿದ ಬೋರ್ಡ್‌ನಲ್ಲಿ ಮೊಗ್ರಾಲ್ ಪೇಟೆ ಎಂಬುದರ ಬದಲಿಗೆ ಪೆರ್ವಾಡ್ ಪೇಟೆ ಎಂದು ಬರೆಯಲಾಗಿದೆ. ಇನ್ನೊಂದೆಡೆ ಅಣಂಗೂರ್ ಎಂಬುದರ ಬದಲು ಅನಗೂರ್ ಎಂದು ನಮೂದಿಸಲಾಗಿದೆ. ಮೊಗ್ರಾಲ್ ಪೇಟೆಯ ಹಳೇ ಲೀಗ್ ಆಫೀಸ್ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿದ ಬೋರ್ಡ್‌ನಲ್ಲಿ ಮೊಗ್ರಾಲ್ ಬದಲಿಗೆ ಪೆರ್ವಾಡ್ ಎಂದು ಹಾಕಲಾಗಿದೆ. ಅದೇ ರೀತಿ, ಮಂಜೇಶ್ವರದ ಹೊಸಂಗಡಿ ಸಮೀಪ ಕನಿಲದ ನಾಮಫಲಕದಲ್ಲಿ ಪೊಸೋಟ್ ಎಂದಿದ್ದು, ಈ ಹಿಂದೆ ಇದೇ ದಾರಿಯಲ್ಲಿ ಸಂಚರಿಸಿದವರು ದಾರಿ ತಪ್ಪಿ ಮತ್ತೊಂದು ಊರಿಗೆ ಸೇರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ವ್ಯವಸ್ಥೆಗಳು ಹೆದ್ದಾರಿ ಪ್ರಾಧಿಕಾರ ಮತ್ತು ನಡೆಯುತ್ತಿರುವ ಊರಾಲುಂಗಲ್ ಸೊಸೈಟಿಗೆ ಸೇರಿದ್ದು, ಕಾಮಗಾರಿ ನಡೆಸುವ ಸಂಸ್ಥೆಯೇ ಕ್ರಮ ಕೈಗೊಳ್ಳಬೇಕು. ಈ ಕುರಿತು ಗ್ರಾಮ ಪಂಚಾಯತಿಗೆ ಯಾವುದೇ ಅಧಿಕಾರವಿಲ್ಲ. ಸ್ಥಳ ನಾಮಗಳನ್ನು ತಪ್ಪಾಗಿ ಬರೆದು ಗೊಂದಲಗೊಳಿಸಿರುವುದು ಖಂಡನೀಯ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಇಲಾಖೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ತಿಳಿಸಲಾಗುವುದು. ನಾಸರ್ ಮೊಗ್ರಾಲ್, ಕುಂಬಳೆ ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net