

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಕಡೆ ಗಾಂಜಾ ಸೇರಿದಂತೆ ಹಲವು ರೀತಿಯ ಮಾದಕ ಸಾಗಾಟ ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುದ್ರೊಳಿ ಕಂಡತ್ತ್‌ಪಳ್ಳಿ ಪರಿಸರಲ್ಲಿ ಹಲವು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳು, ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಬ್ದುಲ್ ಸಮದ್‌ನನ್ನು ಆ.8ರಂದು ಬಂಧಿಸಲಾಗಿದೆ. ಆತನಿಂದ 1.40 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ನಾಡು ಲಿಂಗಪ್ಪಯ್ಯಕಾಡು ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಆರೋಪದಲ್ಲಿ ಕಾರ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಧರ್ಮಲಿಂಗ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 1.90 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊರರಾಜ್ಯದಿಂದ ಬಂದು ಸ್ಥಳೀಯರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಮರವೂರು ಎಂಬಲ್ಲಿ ದಾಳಿ ನಡೆಸಿ ಬಿಹಾರ ಮೂಲದ ದೋಲತ್ ಕುಮಾರ್ ಶರ್ಮಾ, ಮಹಮ್ಮದ್ ಖುಷಲಂ ಎಂಬಿಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಿದ್ದ 1.189ಕೆ.ಜಿ. ಗಾಂಜಾ ಮತ್ತು 219ಗ್ರಾಂ ಬಾಂಗ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡೀಲ್ ಸಮೀಪ ಗಾಂಜಾ ಮಾರಾಟ ಆರೋಪದಲ್ಲಿ ಕಾರ್ತಿಕ್ ಮತ್ತು ಮೋಹಿತ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 800ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನದೇ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರಿಗೆ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೇರಳ ಮಲ್ಲಪ್ಪುರಂ ನಿವಾಸಿ ಪ್ರಣವ್ ಕೆ.ವಿ. ಪ್ರಕರಣದ ಆರೋಪಿ. ಈತ ಮಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಹಲವಾರು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿ 1.100ಕೆ.ಜಿ. ಗಾಂಜಾವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬಂಧಿತ 7ಮಂದಿ ಆರೋಪಿಗಳನ್ನು ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದ್ದು, ಅವರಿಂದ ಕೆಲವೊಂದು ಸೂಕ್ಷ್ಮ ಮಾಹಿತಿ ಲಭಿಸಿದೆ. ಈ ಹಿನ್ನಲೆಯಲ್ಲಿ ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಠಾಣಾ ವ್ಯಾಪ್ತಿಯಲ್ಲೇ ವಿಶೇಷ ತಂಡ ರಚನೆ ಮಾಡಲು ಸೂಚನೆ ನೀಡಲಾಗಿದೆ.