ಸುಳ್ಯ: ಇಲ್ಲಿನ ಮೆಸ್ಕಾಂ ಸಲಹಾ ಸಮಿತಿ ಸದಸ್ಯರ ಸಭೆಯು ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ ವಹಿಸಿದ್ದರು. ಸುಳ್ಯ ಉಪ ವಿಭಾಗಮಟ್ಟದ ನಾಲ್ಕು ಶಾಖೆಯ ಮೆಸ್ಕಾಂ ಸಲಹಾ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿ ವಿವಿಧ ಸಮಸ್ಯೆಗಳ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಸೆಳೆದರು.
ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಸುಳ್ಯದಲ್ಲಿ 110 ಕೆವಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಲೈನ್ ಹಾದುಹೋಗುವ ಸ್ಥಳಗಳ ಸಮಸ್ಯೆಯನ್ನು ಶಾಸಕರ ಮತ್ತು ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪರಿಹರಿಸಬೇಕೆಂದು ಆಗ್ರಹಿಸಿದರು. ಬೆಳ್ಳಾರೆ ಭಾಗದಲ್ಲಿ ಮತ್ತು ಅರಂತೋಡು ಲೈನ್ಮನ್ಗಳ ಕೊರತೆ ಮತ್ತು ಶ್ರೀದಲ್ಲಿ ನೇಮಕ ಮಾಡಬೇಕು ಎಂದು ಇಬ್ರಾಹಿಂ ಅಂಬಟೆಗದ್ದೆ ಮತ್ತು ಜುಬೇರ್ ಅರಂತೋಡು ಆಗ್ರಹಿಸಿದರು.
ಆಲೆಟ್ಟಿ ಅರಂಬೂರು ಪ್ರದೇಶಗಳಲ್ಲಿ ಆಗುತ್ತಿರುವ ವಿದ್ಯುತ್ ವ್ಯತ್ಯಯ ಹಾಗೂ ಸಮಸ್ಯೆಗಳ ಬಗ್ಗೆ ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಸತ್ಯಕುಮಾರ್ ಆಡಿಂಜ ಮತ್ತು ಯೂಸುಫ್ ಅಂಜಿಕಾರ್ ಗಮನಸೆಳೆದರು.
ಸುಳ್ಯ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಮಧುಕರ ಬುಡ್ಲೆಗುತ್ತು, ತಾಜುದ್ದೀನ್ ಅರಂತೋಡು, ಅಬೂಬಕ್ಕರ್ ಅರಫಾ, ಉಷಾ ಗಂಗಾಧರ್, ಸುಮತಿ ಹುಲಿಮನೆ, ನಳಿನಿ ತಡಕಜೆ, ಮೆಸ್ಕಾಂ ಶಾಖೆಗಳ ಜೆ.ಇ. ಮತ್ತು ಮೆಸ್ಕಾಂ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಅರಂತೋಡು ಜೆ.ಇ. ಅಭಿಷೇಕ್ ಸ್ವಾಗತಿಸಿದರು.
ತಂತಿಗೆ ತಾಗಿರುವ ಮರದ ಕೊಂಬೆಗಳು
ತೊಡಿಕಾನ ಮಾರ್ಗದ ಬದಿಯಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡು ಇರುವ ಮರದ ಕೊಂಬೆಗಳನ್ನು ತೆಗೆಯುವಂತೆ ರಾಧಾಕೃಷ್ಣ ಪಾರೆಮಾಜಲು ಮತ್ತು ಚೈತ್ರಾ ತೊಡಿಕಾನ ಆಗ್ರಹಿಸಿದರು. ವಿದ್ಯುತ್ ತಂತಿಗಳು ಹಾದು ಹೋಗಿರುವ ಹೆಚ್ಚಿನ ಎಲ್ಲ ಕಡೆಗಳಲ್ಲಿ ಮರದ ಕೊಂಬೆಗಳ ಕಟ್ಟಿಂಗ್ ಸಮರ್ಪಕವಾಗಿ ಆಗದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಟ್ರೀ ಕಟ್ಟಿಂಗ್ ಮಾಡುವಂತೆ ಆರ್.ಬಿ.ಬಶೀರ್, ನಂದರಾಜ್ ಸಂಕೇಶ್, ತಾಜುದ್ದೀನ್ ಅರಂತೋಡು ಆಗ್ರಹಿಸಿದರು.