ಫುಟ್​ಬಾಲ್​ ಆಟಗಾರ ವೋಹ್ನ್​ ಟ್ರೋಲ್ಫೆ ವಿಲ್ಲಾದಲ್ಲಿ ಕಳ್ಳತನ; ಬೇಲಿಯೇ ಹೊಲ ಮೇಯ್ದ ಪ್ರಕರಣ, ಸಿಕ್ಕಿಬಿದ್ದವನ ಬಂಧನ..

Manjunath
Published on

ಬೆಂಗಳೂರು: ವಿದೇಶಿ ಫುಟ್​ಬಾಲ್​ ಆಟಗಾರ ವೋಹ್ನ್​ ಟ್ರೋಲ್ಫೆ ಅವರ ವಿಲ್ಲಾದಲ್ಲಿ ವಜ್ರದ ಮೂರು ಉಂಗುರಗಳನ್ನು ಕದ್ದ ಆರೋಪಿ ಕೊನೆಗೂ ಎರಡೂವರೆ ತಿಂಗಳ ಬಳಿಕ ಸಿಕ್ಕಿಬಿದ್ದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿತನಾಗಿರುವ ಈ ಆರೋಪಿ ಹೆಸರು ಮಂಜುನಾಥ.

ಇಂದು ಅನ್ನಪೂರ್ಣೇಶ್ವರಿ ನಗರದಲ್ಲಿ ಮಂಜುನಾಥ ವಜ್ರದುಂಗುರ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಫುಟ್​ಬಾಲ್​ ಆಟಗಾರನ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಫುಟ್​ಬಾಲ್​ ಆಟಗಾರ ವೋಹ್ನ್ ಟ್ರೋಲ್ಫೆ ನಂದಿ ರಸ್ತೆಯ‌ ಪ್ರೆಸ್ಟೀಜ್ ಗಾಲ್ಫ್ ಶೈರ್​ನಲ್ಲಿ ವಿಲ್ಲಾ ಹೊಂದಿದ್ದರು. ಆಗಸ್ಟ್ 28ನೇ ತಾರೀಕು ಈ ವಿಲ್ಲಾಗೆ ಹೊಕ್ಕಿದ್ದ ಮಂಜುನಾಥ 25 ಲಕ್ಷ ರೂಪಾಯಿ ಮೌಲ್ಯದ 3 ಡೈಮಂಡ್​ ಉಂಗುರಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಕುರಿತು ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಆರೋಪಿಯ ಪತ್ತೆ ಆಗಿರಲಿಲ್ಲ. ಆರೋಪಿ ಮಂಜುನಾಥ ಫುಟ್​ಬಾಲ್​ ಆಟಗಾರನ ವಿಲ್ಲಾದಲ್ಲೇ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net