ಬೀದಿ ಕಾಮಣ್ಣನಿಗೆ 3 ವರ್ಷ ಜೈಲು: ಜಯನಗರ ವಾಣಿಜ್ಯ ಮಳಿಗೆ ಬಳಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣ..

High Court Logo
Published on

ಬೆಂಗಳೂರು: ರಾಜಧಾನಿಯ ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್​ ಮುಂಭಾಗ ಬಾಲಕಿಯ ಮೈಮುಟ್ಟಿ ದೌರ್ಜನ್ಯ ಎಸಗಿದ್ದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.

ಉತ್ತರಹಳ್ಳಿಯ ಚಿಕ್ಕಲ್ಲಸಂದ್ರ ನಿವಾಸಿ ಟಿ. ಕಾಂತರಾಜ್ ಶಿಕ್ಷಾ ಅಪರಾಧಿ. ಬೀದಿಕಾಮಣ್ಣ ಆಗಿದ್ದ ಕಾಂತರಾಜ್, ಕೆಲಸಕ್ಕೆ ಹೋಗದೆ ಜನಸಂದಣಿ ಪ್ರದೇಶದಲ್ಲಿ ಬಾಲಕಿ ಮತ್ತು ಯುವತಿಯರಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. 2019ರ ಆಗಸ್ಟ್ 14ರಂದು ಜಯನಗರ 4ನೇ ಬ್ಲಾಕ್ ವಾಟರ್ ಟ್ಯಾಂಕ್ ಬಳಿಯ ಪಾದಚಾರಿ ಮಾರ್ಗದಲ್ಲಿ ನಿಂತಿದ್ದ. ಇದೇ ವೇಳೆ ಸಂತ್ರಸ್ತ ಬಾಲಕಿ ತನ್ನ ತಾಯಿ ಜತೆಗೆ ನಡೆದುಕೊಂಡು ಹೋಗುತ್ತಿದ್ದರು. ಅಲ್ಲೇ ನಿಂತಿದ್ದ ಕಾಂತರಾಜ್, ಎದುರಿಗೆ ಬಂದ ಬಾಲಕಿಯ ಮೈಗೆ ಮೈ ತಾಗಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.

ತಕ್ಷಣ ಎಚ್ಚೆತ್ತ ಬಾಲಕಿ, ತಾಯಿ ಪ್ರಶ್ನೆ ಮಾಡಿದ್ದರು. ಅಲ್ಲೇ ಇದ್ದ ಸಾರ್ವಜನಿಕರು ಕಾಂತರಾಜ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ನಮ್ಮ-100ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ, ಕಾಂತರಾಜ್‌ನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಜಯನಗರ ಪೊಲೀಸರು, ವಿಚಾರಣೆ ನಡೆಸಿ ಕಾಂತರಾಜ್ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ಸರ್ಕಾರಿ ಅಭಿಯೋಜಕಿ ಪಿ. ಕೃಷ್ಣವೇಣಿ, ಸಂತ್ರಸ್ತೆ ಪರ ವಾದ ಮಂಡಿಸಿದ್ದರು. ನ್ಯಾ.ಕೆ.ಎನ್. ರೂಪಾ ಅವರು, ವಾದ-ಪ್ರತಿವಾದ ಆಲಿಸಿ ಕಾಂತರಾಜ್ ಅಪರಾಧಿ ಎಂದು ಘೋಷಣೆ ಮಾಡಿದರು. ಮೂರು ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ಮತ್ತು ನೊಂದ ಬಾಲಕಿಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net