

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಇದೀಗ ಮಗುವೊಂದು ಬಲಿಯಾಗಿದ್ದರೆ, ಮತ್ತೊಂದು ಮಗುವಿಗಾಗಿ ಹುಡುಕಾಟ ಮುಂದುವರಿದಿದೆ. ಬೆಂಗಳೂರಿನ ಎಚ್ಬಿಆರ್ ಲೇಔಟ್ನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ಈ ಬಡಾವಣೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿನ ಸಂಪ್ನೊಳಗೆ ಮಳೆನೀರು ತುಂಬಿಕೊಂಡಿದ್ದು, ಮಗುವೊಂದು ಅದರಲ್ಲಿ ಬಿದ್ದು ಸಾವಿಗೀಡಾಗಿದೆ. ಜೊತೆಗಿದ್ದ ಇನ್ನೊಂದು ಮಗು ನಾಪತ್ತೆಯಾಗಿದ್ದು, ಹುಡುಕಾಟ ಇನ್ನೂ ಮುಂದುವರಿದಿದೆ.
ನಿರ್ಮಾಣ ಹಂತದ ಈ ಕಟ್ಟಡದ ಮುಂದಿನ ಆಟದ ಮೈದಾನದಲ್ಲಿ ಆಟ ಆಡುತ್ತಿದ್ದ ಮಕ್ಕಳಿಬ್ಬರು ಚೆಂಡು ಕಟ್ಟಡದೊಳಕ್ಕೆ ಹೋಗಿದ್ದರಿಂದ ಅದನ್ನು ತರಲು ಹೋಗಿದ್ದರು. ಆಗ ನೀರು ತುಂಬಿದ್ದ ಸಂಪ್ ಗಮನಕ್ಕೆ ಬರದೆ ಮಗುವೊಂದು ಅದರೊಳಗೆ ಬಿದ್ದು ಮೃತಪಟ್ಟಿದೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸಂಪ್ನೊಳಗಿದ್ದ ಮಗುವಿನ ಶವ ಹೊರಕ್ಕೆ ತೆಗೆದಿದ್ದಾರೆ. ಆದರೆ ಇನ್ನೊಂದು ಮಗುವಿನ ಸುಳಿವು ಇನ್ನೂ ಸಿಗದ ಕಾರಣ ಹುಡುಕಾಟ ನಡೆಸುತ್ತಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.