ಆಜಾನ್​ಗೆ ಓಂಕಾರದ ಸವಾಲು; 1 ಸಾವಿರ ದೇವಸ್ಥಾನಗಳಲ್ಲಿ ಲೌಡ್​ಸ್ಪೀಕರ್​ನಲ್ಲಿ ಸುಪ್ರಭಾತ

loudspeaker
Published on

ಮಂಗಳೂರು: ಹಿಜಾಬ್​ ವಿವಾದದಿಂದ ಶುರುವಾದ ಕೋಮುಸಂಘರ್ಷ ಶಾಲೆಯ ವಾತಾವರಣದಿಂದ ಮಸೀದಿ-ಮಂದಿರದ ಆವರಣದವರೆಗೂ ಬಂದಿದ್ದು, ಇದೀಗ ಆಜಾನ್​ಗೆ ಓಂಕಾರದ ಸವಾಲು ಕೇಳಿಬಂದಿದೆ. ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇಂಥದ್ದೊಂದು ಸವಾಲೆಸೆದಿದ್ದಾರೆ.

ಮಸೀದಿಗಳಲ್ಲಿ ಲೌಡ್​ಸ್ಪೀಕರ್​ ಮೂಲಕ ಆಜಾನ್​ ಕೂಗುವ ವಿಚಾರವಾಗಿ ಮಾತನಾಡಿರುವ ಮುತಾಲಿಕ್, ಆಜಾನ್ ಮೈಕ್ ತೆಗೆಸಲು ಗಡುವು ನೀಡಿದ್ದರೂ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಹೀಗಾಗಿ ನಾವು ರಾಜ್ಯದ 1 ಸಾವಿರ ದೇವಸ್ಥಾನ-ಮಠಗಳಲ್ಲಿ ಮೇ 9ರಂದು ಮೈಕ್ ಮೂಲಕ ಓಂಕಾರ-ಸುಪ್ರಭಾತ ಹಾಕಲಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ.

ಆಜಾನ್​ಗೆ ಪ್ರತಿಯಾಗಿ ಕೈಗೊಳ್ಳಲಿರುವ ನಮ್ಮ ಈ ಚಳವಳಿ ತಡೆಯಲು ಮುಂದಾದರೆ ಸಂಘರ್ಷ ನಡೆಯುತ್ತದೆ. ಮೈಕ್​ನಲ್ಲಿ ಆಜಾನ್​ ಹೊಮ್ಮುವುದು ನಿಲ್ಲದೇ ಇದ್ದರೆ ನಾವೂ ಮೈಕ್​ನಲ್ಲಿ ನಮ್ಮ ಸುಪ್ರಭಾತ, ಓಂಕಾರ ನಿಲ್ಲಿಸುವುದಿಲ್ಲ. ಈ ಹೋರಾಟಕ್ಕೆ ಎಲ್ಲ ಹಿಂದೂ ಸಂಘಟನೆಗಳು, ಸ್ವಾಮೀಜಿಗಳು, ಧರ್ಮದರ್ಶಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಆಜಾನ್​ ಮೈಕ್ ಇಳಿಸಿದಂತೆ ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಬೇಕು. ಬರೀ ನೋಟಿಸ್ ನೀಡುವ ನಾಟಕ ಮಾಡಬೇಡಿ, ಸರ್ಕಾರ ಇನ್ನಾದರೂ ಧೈರ್ಯ ತೋರಲಿ ಎಂದು ಮಂಗಳೂರಿನಲ್ಲಿ ಇಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net