ಕುಟುಂಬ ರಾಜಕಾರಣ ಏಯ್ಡ್ಸ್​ ಥರ, ಎಲ್ಲ ಪಕ್ಷದಲ್ಲೂ ಇದೆ: ಯತ್ನಾಳ್

YATNAL NEWS
Published on

ಕಲಬುರಗಿ: ತಮ್ಮ ದಿಟ್ಟ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂದು ಮತ್ತೊಂದು ಹೇಳಿಕೆ ನೀಡಿದ್ದು, ಕುಟುಂಬ ರಾಜಕಾರಣದ ಕುರಿತು ಮಾತನಾಡಿದ್ದಾರೆ. ಇಂದು ಕಲಬುರಗಿಯಲ್ಲಿ ಮಾತನಾಡಿದ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಪ್ರಧಾನಿ ಮೋದಿ ಅವರು ಕುಟುಂಬ ರಾಜಕಾರಣ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಒಬ್ಬರೇ ನಾಯಕರ ಮನೆಯಲ್ಲಿ ನಾಲ್ಕು ನಾಲ್ಕು ಮಂದಿ ರಾಜಕೀಯ ಮಾಡುತ್ತಿದ್ದಾರೆ ಎಂದಿರುವ ಯತ್ನಾಳ್, ಕುಟುಂಬ ರಾಜಕಾರಣ ಏಯ್ಡ್ಸ್​ ಥರ, ಅದು ಎಲ್ಲ ಪಕ್ಷದಲ್ಲೂ ಇದೆ ಎಂಬುದಾಗಿ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಕುರಿತು ಕೂಡ ಮಾತನಾಡಿರುವ ಯತ್ನಾಳ್​, ನಾಯಕತ್ವ ಬದಲಾವಣೆ ಮಾಡುವುದು ಬಿಡುವುದು ಕೇಂದ್ರಕ್ಕೆ ಬಿಟ್ಟಿದ್ದು, ಎಲ್ಲಿ ಅಗತ್ಯವಿದೆಯೋ ಅಲ್ಲಿ ಅವರು ಬದಲಾವಣೆ ಮಾಡುತ್ತಾರೆ ಎಂದಿದ್ದಾರೆ. ಜತೆಗೆ, ಲಾಬಿ ಮಾಡುವುದು, ಹಣದ ಪೆಟ್ಟಿಗೆ ತೆಗೆದುಕೊಂಡು ದೆಹಲಿಗೆ ಹೋಗುವುದೆಲ್ಲ ಈಗ ಬಿಜೆಪಿಯಲ್ಲಿಲ್ಲ ಎಂದು ಹೇಳಿದ್ದಾರೆ.

ಯತ್ನಾಳ್​ ಮೇಲೆ ಸ್ವಾಮೀಜಿಗಳ ಆಶೀರ್ವಾದ ಕಡಿಮೆ ಆಗಿದೆ ಎಂದು ಸಿಎಂ ನೀಡಿರುವ ಹೇಳಿಕೆಗೂ ಪ್ರತಿಕ್ರಿಯಿಸಿರುವ ಅವರು, ಸ್ವಾಮೀಜಿಗಳ ಆಶಿರ್ವಾದ ಕೂಡ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ, ಅವರ ಬೇಡಿಕೆ ಕೂಡ ಹೆಚ್ಚಾಗಿರುತ್ತವೆ, ಮನಸಿಗೆ ಬೇಜಾರಾದಾಗ ಒಂದೊಂದು ಮಾತು ಬರುತ್ತಿರುತ್ತವೆ. ಅನೇಕ ಘಟನೆಗಳು ನಡೆದಿವೆ, ಇದರಿಂದ ಸಿಎಂ ಸ್ವಲ್ಪ ವಿಚಲಿತರಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net