

ಬೆಂಗಳೂರು: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿಯಾಗಿದ್ದು, ಪಾದಚಾರಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ. ಕೊಡುಗೆಹಳ್ಳಿ ನಿವಾಸಿ ಮುನಿಯಮ್ಮ (61) ಮೃತ ವೃದ್ಧೆ. ವಿಧಾನಸೌಧ ಡಿ ಗ್ರೂಪ್ ನೌಕರಿಯಿಂದ ನಿವೃತ್ತಿ ಆಗಿದ್ದ ಮುನಿಯಮ್ಮ, ಸೋಮವಾರ ಬ್ಯಾಂಕ್ನಲ್ಲಿನ ಕೆಲಸಕ್ಕಾಗಿ ಬಂದಿದ್ದರು.
ಪೊಲೀಸ್ ಕಾರ್ನರ್ ಜಂಕ್ಷನ್ನಲ್ಲಿ ಮಧ್ಯಾಹ್ನ 1.45ರಲ್ಲಿ ನೃಪತುಂಗ ರಸ್ತೆಯನ್ನು ದಾಟುತ್ತಿರುವಾಗ ನೃಪತುಂಗ ರಸ್ತೆ ಕಡೆಯಿಂದ ವೇಗವಾಗಿ ಬಂದ ಕಸದ ಲಾರಿ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ವೃದ್ಧೆ ಕೆಳಗೆ ಬಿದ್ದಿದ್ದಾರೆ. ಲಾರಿಯ ಎಡಭಾಗದ ಚಕ್ರಗಳು ವೃದ್ಧೆಯ ಎರಡು ಕಾಲಿನ ಮೇಲೆ ಹರಿದ ಪರಿಣಾಮ ತೀವ್ರ ಗಾಯಗೊಂಡು ಕುಸಿದು ಬಿದ್ದಿದ್ದರು.
ಜಂಕ್ಷನ್ನಲ್ಲಿ ಕರ್ತವ್ಯನಿರತ ಹೆಡ್ಕಾನ್ಸ್ಟೆಬಲ್ ಸಿ.ಎಸ್. ಯೋಗೇಶ್, ಸಾರ್ವಜನಿಕರ ಸಹಾಯದಿಂದ ಸಮೀಪದ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾದ ಪರಿಣಾಮ ಚಿಕಿತ್ಸೆ ಫಲಿಸದೆ ವೃದ್ಧೆ ಮೃತಪಟ್ಟಿದ್ದಾರೆ. ಲಾರಿ ಚಾಲಕ ಶಿವಕುಮಾರ್ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.