

|ಹರೀಶ್ ಬೇಲೂರು ಬೆಂಗಳೂರು
ಹಿಂದಿನ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದ ಬಿಬಿಎಂಪಿ ವಾರ್ಡ್ ಮರುವಿಗಂಡಣೆ ಪಟ್ಟಿಯನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಇದರಿಂದಾಗಿ ಹೊಸ ವಾರ್ಡ್ಗಳ ಮರುವಿಂಗಡಣೆ ಬಳಿಕವೇ ಪಾಲಿಕೆ ಚುನಾವಣೆ ನಡೆಯುವ ಸಾಧ್ಯತೆ ಗೋಚರಿಸುತ್ತಿದೆ. ಹಿಂದಿನ ಸರ್ಕಾರ ರಚಿಸಿದ್ದ 243 ವಾರ್ಡ್ಗಳ ಪಟ್ಟಿ ರದ್ದುಗೊಂಡಿದ್ದು, ಹೊಸದಾಗಿ ಎಷ್ಟು ವಾರ್ಡ್ಗಳನ್ನು ರಚಿಸಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಹೊಸ ಸರ್ಕಾರ ರಚಿಸಿದ ವಾರ್ಡ್ಗಳ ಮರುವಿಂಗಡಣೆ ಪಟ್ಟಿಗೆ ಬಿಜೆಪಿ, ಜೆಡಿಎಸ್ ಆಕ್ಷೇಪ ಸಲ್ಲಿಸಿ ಕೋರ್ಟ್ಗೆ ಹೋದಲ್ಲಿ ಪಾಲಿಕೆ ಚುನಾವಣೆ ಇನ್ನಷ್ಟು ದಿನ ವಿಳಂಬವಾಗಬಹುದು. ಹೀಗಾದಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕವೇ ಪಾಲಿಕೆ ಚುನಾವಣೆ ನಡೆಯಬಹುದು ಎನ್ನಲಾಗಿದೆ.
ತಮಗೆ ಅನುಕೂಲಕ್ಕೆ ತಕ್ಕಂತೆ ಹಾಗೂ ಅವೈಜ್ಞಾನಿಕವಾಗಿ 198 ವಾರ್ಡ್ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲಾಗಿತ್ತು ಎಂದು ಹಿಂದೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಕಾನೂನಿನ ಸಂಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ವಾರ್ಡ್ ಮರು ವಿಂಗಡಣೆ ಮಾಡಬೇಕೆಂದು ಈಗಾಗಲೇ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಪಾಲಿಕೆ ವಾರ್ಡ್ಗಳ ಮರುವಿಂಗಡಣಾ ಆಯೋಗವನ್ನು ರಚಿಸಿ ಸರ್ಕಾರ ಆದೇಶಿಸಿದೆ. ಪಾಲಿಕೆ ಮುಖ್ಯ ಆಯುಕ್ತರು ಅಧ್ಯಕ್ಷರಾದರೆ, ಬಿಡಿಎ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಸದಸ್ಯರಾಗಿದ್ದಾರೆ. ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಂಬಂಧ
ಪಟ್ಟಂತೆ ಈಗಾಗಲೇ ಪ್ರಕ್ರಿಯೆ ಶುರುವಾಗಿದ್ದು, ಒಂದೆರಡು ಬಾರಿ ಸಭೆ ನಡೆದಿವೆ. ಆದರೂ, ಮೂರು ಪಕ್ಷಗಳಿಗೆ ಎಷ್ಟು ವಾರ್ಡ್ಗಳಿಗೆ ಚುನಾವಣೆ ನಡೆಯುತ್ತದೆ ಎಂಬುದರ ಬಗ್ಗೆ ಇನ್ನೂ ಗೊಂದಲವಿದೆ.
ಕಾನೂನು ಪ್ರಕಾರ ವಿಂಗಡಿಸಿ: ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಾರ್ಡ್ ಮರುವಿಂಗಡಣೆ ಕರಡು ವರದಿಗೆ ಒಟ್ಟು 3,833 ಆಕ್ಷೇಪಣೆಗಳು ಸಲ್ಲಿಕೆಯಾಗಿತ್ತು. ಇದರಲ್ಲಿ ಶೇ.50ಕ್ಕಿಂತ ಅಧಿಕ ವಾರ್ಡ್ಗಳ ಹೆಸರು ಬದಲಾವಣೆಗೆ ಆಕ್ಷೇಪಣೆಗಳು ಬಂದಿದ್ದವು. ಯಶವಂತಪುರ ಕ್ಷೇತ್ರ ಸಂಬಂಧ ಶೇ.50ಕ್ಕೂ ಅಧಿಕ ಅಕ್ಷೇಪಣೆ ಸ್ವೀಕೃತವಾಗಿತ್ತು.
ಈ ಕ್ಷೇತ್ರ ವ್ಯಾಪ್ತಿಯ ವಾರ್ಡ್ಗಳ ಗಡಿ, ಹೆಸರು ಬದಲಾವಣೆಗೆ 1,967 ಆಕ್ಷೇಪಣೆಗಳು ಸಲ್ಲಿಕೆಯಾಗಿತ್ತು. ಇದರಲ್ಲಿ 1,700 ಆಕ್ಷೇಪಣೆ ವಾರ್ಡ್ಗಳಿಗೆ ಇಡಲಾಗಿದ್ದ ಹೆಸರು ಬದಲಾವಣೆಗೆ ಸಂಬಂಧಿಸಿದ್ದವು. ಉಳಿದಂತೆ
ಕೆ.ಆರ್.ಪುರ ಕ್ಷೇತ್ರ ವ್ಯಾಪ್ತಿಗೆ 479 ಆಕ್ಷೇಪಣೆ ಸಲ್ಲಿಕೆ ಯಾಗಿತ್ತು. ಹಿಂದಿನ ಸರ್ಕಾರ ಮಾಡಿರುವ ತಪ್ಪನ್ನು ಈಗಿನ ಕಾಂಗ್ರೆಸ್ ಸರ್ಕಾರ ಕಾನೂನು ಪ್ರಕಾರದಂತೆ ಅದಷ್ಟೂ ಬೇಗ ವಾರ್ಡ್ಗಳನ್ನು ಪುನರ್ ವಿಂಗಡಿಸಿ ಅಧಿಸೂಚನೆ ಹೊರಡಿಸುವಂತೆ ಸಾರ್ವಜನಿಕರ
ಆಗ್ರಹವಾಗಿದೆ. ಬಿಬಿಎಂಪಿಯ ಜನಪ್ರತಿನಿಧಿಗಳ ಅಧಿಕಾರದ ಅವಧಿ 2020ರ ಸೆಪ್ಟೆಂಬರ್ಗೆ ಪೂರ್ಣಗೊಂಡು 3 ವರ್ಷ ಸಮೀಪಿಸುತ್ತಿದೆ. ವಾರ್ಡ್ ಗಳನ್ನು ಹೆಚ್ಚಿಸುವ ವಿಚಾರವನ್ನು ಮುಂದಿಟ್ಟು
ಹಿಂದಿನ ಸರ್ಕಾರ ಬಿಬಿಎಂಪಿ ಚುನಾವಣೆ ಮುಂದೂಡುತ್ತ ಬಂದಿತ್ತು. ಆ ತಪು್ಪ ಪುನರಾವರ್ತನೆ ಆಗದಂತೆ ಈಗಿನ ಸರ್ಕಾರ ನೋಡಿಕೊಳ್ಳಬೇಕಿದೆ.
ಹೈಕೋರ್ಟ್ ತಪರಾಕಿ
ಪಾಲಿಕೆ ಪ್ರದೇಶದ ಸಂಬಂಧಿಸಿದಂತೆ ವಾರ್ಡ್ಗಳ ಮರುವಿಗಂಡಣೆಗಾಗಿ 2021ರ ಜ.29ರಂದು ಆಯೋಗ ರಚಿಸಲಾಗಿತ್ತು. ಅದರಂತೆ, 2022ರ ಜೂ.16ರಂದು ಜನಗಣತಿ ವರದಿ ಆಧಾರದಲ್ಲಿ ವಾರ್ಡ್ ಮರುವಿಗಂಡಣೆ ಅಂತಿಮಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಂತರ, ಬಿಜೆಪಿ ಸರ್ಕಾರವು 2022ರ ಜು.14ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿ ಸರ್ಕಾರದ ಅಧಿಸೂಚನೆಯನ್ನು ಎತ್ತಿಹಿಡಿದಿತ್ತು. ಆದರೆ, ಇದನ್ನು ಪ್ರಶ್ನಿಸಿ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಹಾಗೂ ಇತರರು ಹೈಕೋರ್ಟ್ನ ವಿಭಾಗೀಯ ಪೀಠದ ಮುಂದೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಕೋರ್ಟ್, ನಿಗದಿತ ಮಾರ್ಗಸೂಚಿ ಮತ್ತು ಕಾನೂನಿನ ಸಂಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ವಾರ್ಡ್ ಮರು ವಿಗಂಡಣೆ ಮಾಡಬೇಕೆಂದು ಆದೇಶಿಸಿತ್ತು.